ನವದೆಹಲಿ :ಜೂನ್ 9ರಿಂದ ತವರಿನಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಗೆ ಭಾರತ ತಂಡವನ್ನು ಘೋಷಿಸಲಾಗಿದ್ದು, ಯುವಪಡೆಗೆ ಮಣೆ ಹಾಕಲಾಗಿದೆ. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಕೋವಿಡ್ ಕಾರಣ ರದ್ದಾಗಿತ್ತು. ಇದೀಗ ಆ ಪಂದ್ಯಕ್ಕೂ ತಂಡವನ್ನು ಘೋಷಿಸಲಾಗಿದೆ.
ಹಿರಿಯರಿಗೆ ವಿಶ್ರಾಂತಿ :ಇಂದು ನಡೆದ ಆಯ್ಕೆ ಮಂಡಳಿಯ ಸಭೆಯಲ್ಲಿ ಐಪಿಎಲ್ನಲ್ಲಿ ಮಿಂಚಿದ ಹೊಸ ಪ್ರತಿಭೆಗಳಿಗೆ ಆಯ್ಕೆಗಾರರು ಮಣೆ ಹಾಕಿದ್ದಲ್ಲದೇ, ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ತಂಡದ ಕಾಯಂ ಮತ್ತು ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ, ಮಹಮ್ಮದ್ ಶಮಿ, ಶಿಖರ್ ದವನ್ಗೆ ವಿಶ್ರಾಂತಿ ನೀಡಲಾಗಿದೆ.
ಹೊಸ ಪ್ರತಿಭೆಗಳಿಗೆ ಮಣೆ : ಇನ್ನು ಐಪಿಎಲ್ನಲ್ಲಿ ಮಿಂಚು ಹರಿಸಿದ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ತಂಡದಲ್ಲಿ ಮತ್ತೊಮ್ಮೆ ಸ್ಥಾನ ಪಡೆದ ಋತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರವಿ ಬಿಷ್ಣೋಯಿ, ಹರ್ಷಲ್ ಪಟೇಲ್ಗೆ ಮತ್ತೊಂದು ಅವಕಾಶ ನೀಡಲಾಗಿದೆ.
ಉಮ್ರಾನ್ ಮಲಿಕ್ಗೆ ಒಲಿದ ಭಾಗ್ಯ : ಈ ಸೀಸನ್ ಐಪಿಎಲ್ನಲ್ಲಿ ತನ್ನ ವೇಗದ ಮೂಲಕವೇ ಮಿಂಚು ಹರಿಸಿದ ಉಮ್ರಾನ್ ಮಲಿಕ್ಗೆ ಆಯ್ಕೆಗಾರರು ಅಸ್ತು ಎಂದಿದ್ದಾರೆ. ಹೈದರಾಬಾದ್ ವೇಗಿ ಪರ ಮಾಜಿ ಆಟಗಾರರು ಬ್ಯಾಟ್ ಬೀಸಿದ್ದು, ಇದೀಗ ಟಿ-20 ತಂಡದಲ್ಲಿ ಸ್ಥಾನ ನೀಡಲಾಗಿದೆ. ಎಡಗೈ ವೇಗಿ ಹರ್ಷದೀಪ್ ಸಿಂಗ್ ಗೆ ಚೊಚ್ಚಲ ಅವಕಾಶ ದೊರೆತಿದೆ.
ಮರಳಿದ ಕಾರ್ತಿಕ್, ಪಾಂಡ್ಯ :ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ತಂಡಕ್ಕೆ ಮರಳಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ತಂಡದಿಂದ ಹೊರಗಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ಗುಜಾರಾತ್ನ ಮುನ್ನಡೆಸಿ ಬೌಲಿಂಗ್ ಕೂಡ ಮಾಡಿ ಫಿಟ್ ಇರುವುದಾಗಿ ಸಂದೇಶ ರವಾನಿಸಿದ್ದಾರೆ. ಆರ್‌ಸಿಬಿಯಲ್ಲಿ ಫಿನಿಷರ್ ಆಗಿ ಕಂಡು ಬಂದ ದಿನೇಶ್ ಕಾರ್ತಿಕ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮೂರು ವರ್ಷಗಳ ನಂತರ ದಿನೇಶ್ ಕಾರ್ತಿಕ್ ತಂಡಕ್ಕೆ ಮಳಿದ್ದಾರೆ. 191.33ರ ಬ್ಯಾಟಿಂಗ್ ಸ್ಟ್ರೈಕ್ ರೇಟ್‌ನೊಂದಿಗೆ ಈ ಐಪಿಎಲ್ ಆವೃತ್ತಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.