ಹ್ಯಾಂಗ್ಝೌ (ಚೀನಾ): ಮೊದಲ ಬಾರಿಗೆ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡ ಆಡುತ್ತಿದೆ. ಈಗಾಗಲೇ ಭಾರತೀಯ ವನಿತೆಯರ ತಂಡ ಬಾಂಗ್ಲಾದೇಶವನ್ನು ಮಣಿಸಿ ಫೈನಲ್ಗೆ ಪ್ರವೇಶಿಸಿದೆ. ಎರಡನೇ ಸೆಮಿ ಫೈನಲ್ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡ ಮುಖಾಮುಖಿ ಆಗಿದ್ದವು. ಇದರಲ್ಲಿ ಪಾಕಿಸ್ತಾವನ್ನು ಮಣಿಸಿದ ಸಿಂಹಳದ ವನಿತಿಯರು ಅಂತಿಮ ಹಣಾಹಣಿಗೆ ಸಿದ್ಧರಾಗಿದ್ದಾರೆ. ನಾಳೆ ಚಿನ್ನಕ್ಕಾಗಿ ಭಾರತ ಮತ್ತು ಲಂಕಾ ನಡುವೆ ಪೈಪೋಟಿ ನಡೆಯಲಿದೆ.
ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 51 ರನ್ಗೆ ಕಟ್ಟಿಹಾಕಿದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಬಾಂಗ್ಲಾದೇಶಕ್ಕೆ ಭಾರತೀಯ ವನಿತೆಯರ ಪ್ರಬಲ ಬೌಲಿಂಗ್ ದಾಳಿ ಕಾಡಿತು. ಪೂಜಾ ವಸ್ತ್ರಾಕರ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಉಳಿದಂತೆ ಎಲ್ಲರೂ ಒಂದೊಂದು ವಿಕೆಟ್ ಹಂಚಿಕೊಂಡರು. ಬಾಂಗ್ಲಾ ನಾಯಕಿ ನಿಗರ್ ಸುಲ್ತಾನಾ 12 ರನ್ ಗಳಿಸಿದ್ದೇ ಅವರ ತಂಡದ ಬೃಹತ್ ಮೊತ್ತ. ನಹಿದಾ ಅಕ್ತರ್ 9, ಸೋಭಾನಾ ಮೊಸ್ತರಿ ಮತ್ತು ರಿತು ಮೋನಿ ತಲಾ 8 ರನ್ ಗಳಿಸಿದರು. ಐವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
52 ರನ್ ಸಂಕ್ಷಿಪ್ತ ಗುರಿಯನ್ನು ಬೆನ್ನು ಹತ್ತಿದ ಭಾರತದ ವನಿತೆಯರು 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದರು. ನಾಯಕಿ ಮಂದಾನ 7 ರನ್ ಔಟ್ ಆದರೆ, ಶೆಫಾಲಿ ವರ್ಮಾ 17 ರನ್ಗೆ ವಿಕೆಟ್ ಕೊಟ್ಟರು. ಜೆಮಿಕಾ ರೋಡ್ರಿಗಸ್ ಅಜೇಯ 20 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. 8.2 ಓವರ್ನಲ್ಲಿ 8 ವಿಕೆಟ್ ಉಳಿಸಿಕೊಂಡು ಭಾರತದ ತಂಡ 52 ರನ್ ಗಳಿಸಿತು.
ಎರಡನೇ ಸೆಮಿಫೈನಲ್ಸ್: ಎರಡನೇ ಸೆಮಿಸ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿ ಆಗಿದ್ದವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ ನಿಗದಿತ ಓವರ್ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ಲಂಕಾ 16.3 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿತು. ಈ ಮೂಲಕ 6 ವಿಕೆಟ್ಗಳ ಗೆಲುವು ದಾಖಲಿಸಿ ಫೈನಲ್ಗೆ ಪ್ರವೇಶಿಸಿದೆ.