ಮುಂಬೈ (ಮಹಾರಾಷ್ಟ್ರ): ಮಂಗಳವಾರ ಇಲ್ಲಿ ನಡೆಯಲಿರುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಮಹಿಳಾ ತಂಡವು ತವರಿನಲ್ಲಿ ಕ್ಲೀನ್ ಸ್ವೀಪ್ ಮುಖಭಂಗದಿಂದ ತಪ್ಪಿಸಿಕೊಳ್ಳಲು ಮತ್ತು ಪ್ರಬಲ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಒಂಬತ್ತು ಪಂದ್ಯಗಳ ಸೋಲಿನ ಸರಣಿಯನ್ನು ಅಂತ್ಯಗೊಳಿಸಲು ಗೆಲುವಿನ ಹುಡುಕಾಟದಲ್ಲಿದೆ.
ಮೊದಲ ಪಂದ್ಯದಲ್ಲಿ ಅಷ್ಟೊಂದು ಉತ್ತಮ ಪ್ರದರ್ಶನ ನೀಡದಿದ್ದರೂ, ಎರಡನೇ ಪಂದ್ಯವನ್ನು ಕೊನೆಯ ಅಂಚಿನಲ್ಲಿ ತಂಡ ಕಳೆದುಕೊಂಡಿತು. ಆಸ್ಟ್ರೇಲಿಯಾ ವಿರುದ್ಧ ಸರಣಿ ಸಮಬಲ ಆಗುವ ನಿರೀಕ್ಷೆ ಇತ್ತು. ಆದರೆ, ಕೇವಲ 3 ರನ್ಗಳಿಂದ ಪಂದ್ಯವನ್ನು ಭಾರತ ಕೈಚೆಲ್ಲಿ ಸರಣಿ ಕಳೆದುಕೊಂಡಿತು. ಎರಡನೇ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ವೇಳೆ 7 ಕ್ಯಾಚ್ ಕೈಚೆಲ್ಲಿದ್ದು ಪಂದ್ಯದ ಮೇಲೆ ದೊಡ್ಡ ಪರಿಣಾಮವನ್ನು ಮಾಡಿತು.
ಬಲಗೊಳ್ಳ ಬೇಕಿದೆ ಬ್ಯಾಟಿಂಗ್: ನಾಯಕಿ ಹರ್ಮನ್‌ಪ್ರೀತ್ ಕೌರ್ ಐತಿಹಾಸಿಕ ಟೆಸ್ಟ್ ಫಲಿತಾಂಶದ ಜೊತೆಗೆ 2023ರಲ್ಲಿ ಪ್ರಶಂಸನೀಯ ಮುಂದಾಳತ್ವವನ್ನು ನಡೆಸಿಕೊಟ್ಟಿದ್ದಾರೆ. ವೈಯಕ್ತಿಕ ಪ್ರದರ್ಶನದಲ್ಲಿ ಈ ವರ್ಷ ಕೌರ್ ಸಾಮಾನ್ಯ ಪ್ರದರ್ಶನ ನೀಡಿದರೂ ನಾಯಕತ್ವದಲ್ಲಿ ಯಶಸ್ಸು ಕಂಡಿದ್ದಾರೆ. ಎಂಟು ಇನ್ನಿಂಗ್ಸ್‌ಗಳಲ್ಲಿ ಕೇವಲ ಮೂರು ಬಾರಿ ಎರಡಂಕಿಯಲ್ಲಿ ರನ್ ಗಳಿಸಿದ್ದಾರೆ, ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ 49 ರನ್ ಗಳಿಸಿದ್ದು ಗಮನಾರ್ಹ ಇನ್ನಿಂಗ್ಸ್ ಆಗಿದೆ. ಇನ್ನು ತಂಡಕ್ಕೆ ಕೌರ್ ಸ್ಕೋರ್ ಕೊರತೆಯ ನಡುವೆ ರಿಚಾ ಘೋಷ್ (96), ಜೆಮಿಮಾ ರಾಡ್ರಿಗಸ್ (82 ಮತ್ತು 44), ದೀಪ್ತಿ ಶರ್ಮಾ ಆಲ್ರೌಂಡ್ ಪ್ರದರ್ಶನ ಬಲವಾಗಿದೆ.
2007ರ ನಂತರ ಅಂದರೆ ಸುಮಾರ 16 ವರ್ಷಗಳಿಂದ ಆಸೀಸ್ ವನಿತೆಯರ ವಿರುದ್ಧ ಭಾರತ ಗೆಲುವು ಸಾಧಿಸಿಲ್ಲ. ಈ ದಾಖಲೆಯನ್ನು ಮುರಿಯಲು ಬ್ಯಾಟಿಂಗ್ ವೈಫಲ್ಯ ಮತ್ತು ಕ್ಷೇತ್ರ ರಕ್ಷಣೆಯಲ್ಲಾಗುತ್ತಿರುವ ಲೋಪವನ್ನು ತಂಡ ತಿದ್ದಿಕೊಳ್ಳಲೇ ಬೇಕಿದೆ. ಮುಂದಿನ ವರ್ಷ ತವರಿನಲ್ಲಿ ವಿಶ್ವಕಪ್ ನಡೆಯುವ ವೇಳೆಗೆ ಈ ತಪ್ಪುಗಳನ್ನು ತಂಡ ಸರಿಪಡಿಸಿಕೊಳ್ಳುವ ಅಗತ್ಯ ಇದೆ.