ಮುಂಬೈ (ಮಹಾರಾಷ್ಟ್ರ): 9 ವರ್ಷಗಳ ನಂತರ ತವರಿನಲ್ಲಿ ವನಿತೆಯರ ಕ್ರಿಕೆಟ್ ತಂಡ ಟೆಸ್ಟ್ ಪಂದ್ಯವನ್ನಾಡಿತು. ಈ ಮ್ಯಾಚ್ನಲ್ಲಿ ಇಂಗ್ಲೆಂಡ್ ಮಹಿಳಾ ತಂಡ ಎದುರಿಸಿದ ಹರ್ಮನ್ಪ್ರೀತ್ ಪಡೆ 347 ರನ್‌ಗಳ ಗೆಲುವು ದಾಖಲಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದೆ. ಇದು ವಿಶ್ವ ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್‌ಗಳ ವಿಷಯದಲ್ಲಿ ಅತಿದೊಡ್ಡ ಗೆಲುವಾಗಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಒಟ್ಟು 40 ಟೆಸ್ಟ್ ಪಂದ್ಯಗಳಲ್ಲಿ 6ನೇ ಗೆಲುವು ಸಾಧಿಸಿದೆ. ಉಳಿದ 6 ಸೋತಿದ್ದು, 17 ಡ್ರಾನಲ್ಲಿ ಅಂತ್ಯವಾದರೆ, ಒಂದು ಪಂದ್ಯ ಫಲಿತಾಂಶ ರಹಿತವಾಗಿದೆ.
ಇಂಗ್ಲೆಂಡ್ ವಿರುದ್ಧ ಬಲಿಷ್ಠ ಭಾರತ:ಈ ಜಯದಿಂದ ಭಾರತದ ವನಿತೆಯರು ಇಂಗ್ಲೆಂಡ್ ವಿರುದ್ಧವೇ ಮೂರನೇ ಗೆಲುವನ್ನು ದಾಖಲಿಸಿದಂತಾಗಿದೆ. ಇಂಗ್ಲೆಂಡ್ ವಿರುದ್ಧ ಒಟ್ಟು 15 ಪಂದ್ಯವಾಡಿರುವ ಭಾರತ 3 ರನ್ ಗೆದ್ದು 1 ರಲ್ಲಿ ಸೋತಿದೆ ಉಳಿದವು ಡ್ರಾನಲ್ಲಿ ಅಂತ್ಯವಾಗಿದೆ. ಆದರೆ, ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಭಾರತಕ್ಕೆ ಇದು ಮೊದಲ ಗೆಲುವಾಗಿದೆ. 2014ರಲ್ಲಿ ಇಂಗ್ಲೆಂಡ್ನಲ್ಲಿ ಎರಡು ಪಂದ್ಯಗಳನ್ನು ವುವೆನ್ಸ್ ಟೀಮ್ ಗೆದ್ದಿತ್ತು.
ದಾಖಲೆಯ ರನ್ ಜಯ: 25 ವರ್ಷಗಳ ಹಿಂದಿನ ದಾಖಲೆಯನ್ನು ಭಾರತ ಶನಿವಾರ ಮುರಿದಿದೆ. 1998ರಲ್ಲಿ ಪಾಕಿಸ್ತಾನವನ್ನು ಶ್ರೀಲಂಕಾ 309 ರನ್‌ಗಳಿಂದ ಸೋಲಿಸಿತ್ತು. ಇದು ವನಿತೆಯರ ಟೆಸ್ಟ್ನ ದೊಡ್ಡ ಅಂತರದ ಗೆಲುವಾಗಿತ್ತು. ಶನಿವಾರ ಭಾರತ 347 ರನ್ ಅಂತರದ ಗೆಲುವು ದಾಖಲಿಸುವ ಮೂಲಕ ಈ ದಾಖಲೆಯನ್ನು ಬ್ರೇಕ್ ಮಾಡಿದೆ.