ಮುಂಬೈ:2023ರ ಮೊದಲ ಸರಣಿಯನ್ನು ಭಾರತ ಲಂಕಾದೊಂದಿಗೆ ವಾಂಖೆಡೆಯಲ್ಲಿ ಆಡುತ್ತಿದ್ದು, ಮೊದಲ ಪಂದ್ಯದಲ್ಲಿಟಾಸ್ ಸೋತು ಬ್ಯಾಟಿಂಗ್ ಮಾಡಲಿದೆ. ಈ ಸರಣಿಯ ನಾಯಕತ್ವ 2022ರ ಐಪಿಎಲ್ ವಿಜೇತ ನಾಯಕ ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ. ಈ ಪಂದ್ಯದಿಂದ ಶಿವಂ ಮಾವಿ ಮತ್ತು ಶುಭಮನ್ ಗಿಲ್ ಅಂತಾರಾಷ್ಟ್ರೀಯ ಟಿ-20ಗೆ ಪದಾರ್ಪಣೆ ಮಾಡಿದ್ದಾರೆ.
ಇಶನ್ ಕಿಶನ್ ಅವರೊಂದಿಗೆ ಇಂದು ಪದಾರ್ಪಣೆ ಮಾಡಿದ ಶುಭಮನ್ ಗಿಲ್ ಪಂದ್ಯ ಆರಂಭಿಸಲಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಟಿ-20 ತಂಡದಲ್ಲಿದ್ದ ಅರ್ಷದೀಪ್ ಅವರನ್ನು ಕೈ ಬಿಡಲಾಗಿದ್ದು, ಬೌಲಿಂಗ್ ವಿಭಾಗದಲ್ಲಿ ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್ ಕಾಣಿಸಿಕೊಳ್ಳಲಿದ್ದಾರೆ.
ಪಿಚ್ ವರದಿ: ಹಿಂದಿನ ಪಂದ್ಯಗಳ ಲೆಕ್ಕಾಚಾರದಲ್ಲಿ ಬ್ಯಾಟರ್‌ಗಳಿಗೆ ಸಂಪೂರ್ಣ ಸಹಾಯವಾಗುವ ಪಿಚ್ ಆಗಿದೆ. ಬೌಂಡರಿ ಕಿರಿದಾಗಿರುವುದರಿಂದ ಸಿಕ್ಸ್ ಮತ್ತು ಫೋರ್ ಸುಲಭವಾಗಿ ಗಳಿಸಲು ಸಾಧ್ಯವಿದೆ. ಪಿಚ್ನ ಮೇಲ್ಮೈ ಬೌನ್ಸ್ ಮತ್ತು ಪೇಸ್ ಕೂಡ ಇರುವುದರಿಂದ ಬೌಲರ್ಗಳಿ ರನ್ ಕಡಿವಾಣ ಹಾಕುವುದು ಕಠಿಣವಾಗಲಿದೆ. ರಾತ್ರಿ ಇಬ್ಬನಿ ಇರುವ ಸಾಧ್ಯತೆ ಹೆಚ್ಚಿದ್ದು ಎರಡನೇ ಇನ್ನಿಂಗ್ಸ್ ಆಡುವ ಬ್ಯಾಟರ್‌ಗಳಿಗೆ ಪಿಚ್ ಸಹಕಾರಿಯಾಗಿರಲಿದೆ ಎಂದು ಅಜಿತ್ ಅಗರ್ಕರ್ ಪಿಚ್ ರಿಪೋರ್ಟ್ನಲ್ಲಿ ಹೇಳಿದ್ದಾರೆ.
ಇಬ್ಬನಿ ಇರುವುದರಿಂದ ಬೌಲಿಂಗ್ಗೆ ಆಯ್ಕೆ:ಟಾಸ್ ಗೆದ್ದ ನಂತರ ಲಂಕಾ ನಾಯಕ ಶನಕ ಮಾತನಾಡಿ, ‘‘ಮೊದಲು ಬೌಲ್ ಮಾಡಲು ಇಚ್ಚಿಸುತ್ತೇವೆ. ಪಿಚ್ ವರದಿಯ ಪ್ರಕಾರ ರಾತ್ರಿ ವೇಳೆ ಇಬ್ಬನಿ ಹೆಚ್ಚಿರುವುದರಿಂದ ಚೇಸಿಂಗ್ ಮಾಡಲು ಪಿಚ್ ಸಹಕಾರಿಯಾಗಿರಲಿದೆ. ವಿಶ್ವಕಪ್ ಹೊರತುಪಡಿಸಿ ಟಿ20 ಪಂದ್ಯಗಳಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿದೆ. ನಾವು ಹಿಂದೆ ಇದ್ದ ಅದೇ ಬ್ಯಾಟಿಂಗ್ ಲೈನ್ ಅಪ್ ಮುಂದುವರೆಸುತ್ತಿದ್ದೇವೆ. ಬೌಲಿಂಗ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ‘‘ ಎಂದರು.
ಭಾರತಕ್ಕಾಗಿ ಆಡಲು ಯಾವಾಗಲೂ ಉತ್ಸುಕನಾಗಿದ್ದೀನಿ: ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ನಂತರ ಮಾತನಾಡಿ, ನಾಯಕನಾಗಿ ಮಾತ್ರವಲ್ಲ ದೇಶಕ್ಕಾಗಿ ಆಡಲು ಯಾವಾಗಲೂ ಉತ್ಸುಕನಾಗಿದ್ದೇನೆ. ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಈ ಹೊಸ ತಂಡ ಮತ್ತು ಆಟಗಾರರು ತಮ್ಮನ್ನು ತಾವು ವ್ಯಕ್ತಪಡಿಸಿ ಕೊಳ್ಳುತ್ತಾರೆ ಎಂಬುದನ್ನು ನೋಡಲು ಉತ್ಸುಕನಾಗಿದ್ದೇನೆ. ಚೇಸಿಂಗ್ಗೆ ಉತ್ತಮವಾದ ಪಿಚ್ ಇದು ಇಲ್ಲಿ ಮೊದಲು ಬ್ಯಾಟ್ ಮಾಡುತ್ತಿದ್ದೇವೆ. ಎದುರಾಳಿಗೆ ಉತ್ತಮ ಗುರಿ ನೀಡಲು ತಂಡ ಅಣಿಯಾಗಿದೆ. ಇಂದು ಶುಭಮನ್ ಗಿಲ್ ಮತ್ತು ಶಿವಂ ಮಾವಿ ಟಿ20 ಅಂತರಾಷ್ಟ್ರೀ ಪಂದ್ಯಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ತಿಳಿದಿದ್ದಾರೆ.