ಗುವಾಹಟಿ(ಬರ್ಸಾಪರಾ):ಟಿ-20 ಸರಣಿ ಗೆದ್ದು ಬೀಗಿರುವ ಭಾರತ ಜಯವನ್ನು ಮುಂದುವರೆಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್ನಲ್ಲಿ ಶ್ರೀಲಂಕಾವನ್ನು 67 ರನ್ಗಳಿಂದ ಸೋಲಿಸಿದೆ. ಈ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 1-0ರಿಂದ ಮುನ್ನಡೆ ಸಾಧಿಸಿದೆ. ಭಾರತ ತಂಡ ನೀಡಿದ್ದ 374 ರನ್ನ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ್ದ ಲಂಕಾ ತಂಡ 50 ಓವರ್ಗಳಲ್ಲಿ 306 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಗೆದ್ದು ಶ್ರೀಲಂಕಾ ಕ್ಷೇತ್ರ ರಕ್ಷಣೆಯನ್ನು ಆಯ್ದು ಭಾರತಕ್ಕೆ ಬ್ಯಾಟಿಂಗ್ಗೆ ಆಹ್ವಾನ ನೀಡಿತು. ಮೊದಲ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಶತಕದ ಆಟ ಮತ್ತು ರೋಹಿತ್ ಶರ್ಮಾ, ಶುಭಮನ್ ಗಿಲ್ ಅವರ ಅರ್ಧ ಶತಕದ ನೆರವಿನಿಂದ ಭಾರತ ಏಳು ವಿಕೆಟ್ ನಷ್ಟಕ್ಕೆ 373 ರನ್ಗಳಿಸಿತ್ತು. ವಿರಾಟ್ ಕೊಹ್ಲಿ 113 ರನ್, ಶೂಭಮನ್ ಗಿಲ್ 70 ಮತ್ತು ರೋಹಿತ್ ಶರ್ಮಾ 83 ರನ್ ಬಾರಿಸಿದರು.
ಗೆಲುವಿಗಾಗಿ ನಾಯಕನ ಏಕಾಂಗಿ ಹೋರಾಟ:ಲಂಕಾ ಪರದಸುನ್ ಶನಕ ತಂಡದ ವಿಕೆಟ್ ಒಂದೆಡೆ ಉರುಳುತ್ತಿದ್ದರೂ ಗೆಲುವಿಗಾಗಿ ತಮ್ಮ ಪ್ರಯತ್ನ ಮುಂದುವರೆಸಿದ್ದರು. ತಮ್ಮ ಫಾರ್ಮ್ ಅನ್ನು ಮುಂದುವರೆಸಿದ ನಾಯಕ 88 ಬಾಲ್ಗಳಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್ನಿಂದ ಶತಕ ಗಳಿಸಿದರು. ಆದರೆ, ಅವರ ಶತಕ ಪಂದ್ಯ ಗೆಲ್ಲಿಸುವಲ್ಲಿ ಸಹಕಾರಿಯಾಗಲಿಲ್ಲ.
ಲಂಕಾಕ್ಕೆ ಆರಂಭಿಕ ಆಘಾತ ನೀಡಿದ ಸಿರಾಜ್:ಪಾತುಮ್ ನಿಸ್ಸಾಂಕ್ ಮತ್ತು ಅವಿಷ್ಕ ಫೆರ್ನಾಂಡೊ ಲಂಕಾ ಪರ ಇನ್ನಿಂಗ್ಸ್ ಆರಂಭಿಸಿದರು. 19 ರನ್ ಗಳಿಸಿದ್ದ ಸಿಂಹಳೀಯರಿಗೆ ಮೊಹಮ್ಮದ್ ಸಿರಾಜ್ ಶಾಕ್ ನೀಡಿದರು. 12 ಎಸೆತಗಳಲ್ಲಿ 5 ರನ್ನಿಂದ ಆಡುತ್ತಿದ್ದ ಅವಿಷ್ಕ ಫೆರ್ನಾಂಡೊ ಸಿರಾಜ್ ಬೌಲಿಂಗ್ನಲ್ಲಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿ ಔಟ್ ಆದರು. ಇವರ ಬೆನ್ನಲ್ಲೇ ಬಂದ ಕುಸಲ್ ಮೆಂಡಿಸ್ ರನ್ ಗಳಿಸದೇ ಡಕ್ ಔಟ್ ಆದರು.