ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಫೈನಲ್ಗೆ ಪ್ರವೇಶಿಸಬೇಕಾದರೆ ಇಂದು ನಡೆಯಲಿರುವ ಸೆಮಿಸ್ನಲ್ಲಿ ಆಂಗ್ಲರ ವಿರುದ್ಧ ವಿಜಯ ಸಾಧಿಸಬೇಕಾಗಿದೆ. ಆದರೆ ರೋಹಿತ್ ಸೇನೆಗೆ ಇದು ಕಠಿಣ ಸವಾಲಾಗಿದೆ. ಈ ಪಂದ್ಯದಲ್ಲಿ ಭಾರತ ಫೇವರಿಟ್ ತಂಡದಂತೆ ಕಂಡರೂ ಇಂಗ್ಲೆಂಡ್ ಅನ್ನು ಕಡೆಗಣಿಸುವಂತಿಲ್ಲ.
ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೋರಾಟದ ದಾಖಲೆ ಬಲಿಷ್ಠವಾಗಿದೆ. ಈ ಹಿಂದೆ ಈ ಎರಡು ತಂಡಗಳು 22 ಬಾರಿ ಮುಖಾಮುಖಿಯಾಗಿದ್ದು, ಗೆಲುವು ಬಹುತೇಕ ಸಮಾನವಾಗಿದೆ. ಉಭಯ ತಂಡಗಳ ಪ್ರದರ್ಶನ ಹೀಗಿದೆ..
ಭಾರತ ಮತ್ತು ಇಂಗ್ಲೆಂಡ್ ಇದುವರೆಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ 22 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 12 ಬಾರಿ ಗೆದ್ದಿದ್ದರೆ, ಇಂಗ್ಲೆಂಡ್ 10 ಬಾರಿ ಗೆದ್ದಿದೆ.
ಟೀಂ ಇಂಡಿಯಾ ಈ ವರ್ಷ ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ 3 ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ತವರು ನೆಲದಲ್ಲಿ ನಡೆದ 5 ಟಿ20 ಸರಣಿಯನ್ನು ಭಾರತ 3-2ರಿಂದ ಗೆದ್ದುಕೊಂಡಿತ್ತು.
ಈ ವರ್ಷ ಜುಲೈನಲ್ಲಿ ನಡೆದಿದ್ದ T20 ಸರಣಿಯಲ್ಲಿ ಇಂಗ್ಲೆಂಡ್ ಭಾರತದ ವಿರುದ್ಧ ಗರಿಷ್ಠ 215 ರನ್ ಗಳಿಸಿದ್ದು ಗಮನಾರ್ಹ..
T20 ವಿಶ್ವಕಪ್‌ನಲ್ಲಿ ಎರಡು ತಂಡಗಳು ಮೂರು ಬಾರಿ (2007, 2009, 2012) ಮುಖಾಮುಖಿಯಾಗಿವೆ. ಭಾರತ ಎರಡಲ್ಲಿ ವಿಜಯ ಸಾಧಿಸಿದ್ರೆ, ಇಂಗ್ಲೆಂಡ್ ಒಂದು ಪಂದ್ಯ ಗೆದ್ದಿದೆ.
ಸೆಪ್ಟೆಂಬರ್ 19, 2007 ರಂದು ಡರ್ಬನ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು ದೊರಕಿತ್ತು. ಈ ಪಂದ್ಯದಲ್ಲಿ ಭಾರತ 218/4 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿಯೇ ಯುವರಾಜ್ ಸಿಂಗ್ (58) ಸ್ಟುವರ್ಟ್ ಬ್ರಾಡ್ ಬೌಲಿಂಗ್ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಪಂದ್ಯ ಶ್ರೇಷ್ಠ ಎನಿಸಿಕೊಂಡರು.
2009 ರ ವಿಶ್ವಕಪ್‌ನಲ್ಲಿ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಬಳಿಕ ಬ್ಯಾಟಿಂಗ್‌ಗೆ ಇಳಿದ ಭಾರತ 150/5 ರನ್‌ಗಳನ್ನು ಕಲೆ ಹಾಕಿ ಕೇವಲ ಇಂಗ್ಲೆಂಡ್ ವಿರುದ್ಧ 3 ರನ್‌ಗಳ ಸೋಲು ಕಂಡಿತು.
2012 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 90 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 170/4 ರನ್ ಕಲೆ ಹಾಕಿತ್ತು. ಭಾರತ ನೀಡಿದ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 14.4 ಓವರ್‌ಗಳಲ್ಲಿ 80 ರನ್‌ಗಳಿಗೆ ಆಲೌಟಾಗಿತ್ತು. ಇದು ಭಾರತದ ವಿರುದ್ಧ ಆಂಗ್ಲರ ಟೀಂ ಮಾಡಿದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಅಂದ್ರೆ 589 ರನ್ ಗಳಿಸಿದ್ದಾರೆ. ಆ ಬಳಿಕ ರೋಹಿತ್ ಶರ್ಮಾ 383 ರನ್ ಗಳಿಸಿದ್ದಾರೆ. ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಕೂಡ 117 ರನ್ ಗಳಿಸಿ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಯುಜುವೇಂದ್ರ ಚಹಾಲ್ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿದ್ದಾರೆ. ಅವರು 11 ಪಂದ್ಯಗಳಲ್ಲಿ 16 ವಿಕೆಟ್ ಪಡೆದು ಮಿಂಚಿದ್ದಾರೆ. ಇದಾದ ಬಳಿಕ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 13 ಪಂದ್ಯಗಳಲ್ಲಿ 14 ವಿಕೆಟ್ ಪಡೆದರೆ, ಭುವಿ 9 ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದಾರೆ.
ಜೋಸ್ ಬಟ್ಲರ್ ಭಾರತದ ವಿರುದ್ಧ ಅತಿ ಹೆಚ್ಚು (395 ರನ್) ರನ್ ಗಳಿಸಿದ್ದಾರೆ. ಅಲೆಕ್ಸ್ ಹೇಲ್ಸ್ 245 ರನ್ ಗಳಿಸಿ ಮಿಂಚಿದ್ದಾರೆ. ಇಂಗ್ಲೆಂಡ್ ಬೌಲರ್ ಕ್ರಿಸ್ ಜೋರ್ಡಾನ್ ಟೀಂ ಇಂಡಿಯಾ ವಿರುದ್ಧ ಅತಿ ಹೆಚ್ಚು ವಿಕೆಟ್ ಕಬಳಿಸಿದ್ದಾರೆ. ಅವರು 14 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಮೇನ್ ಅಲಿ 8 ಪಂದ್ಯಗಳಲ್ಲಿ 7 ವಿಕೆಟ್ ಮತ್ತು ಆದಿಲ್ ರಶೀದ್ 11 ಪಂದ್ಯಗಳಲ್ಲಿ 7 ವಿಕೆಟ್ ಪಡೆದ ಬೌಲರ್ಗಳಾಗಿದ್ದಾರೆ.
ಒಟ್ಟಿನಲ್ಲಿ ಇಂದು ನಡೆಯುವ ಸೆಮಿಸ್ ಪಂದ್ಯದಲ್ಲಿ ಉಭಯ ತಂಡಗಳ ಶಕ್ತಿ ಸಮಬಲವಾಗಿದೆ. ಪಂದ್ಯ ಮುಗಿದ ಬಳಿಕವೇ ಫೈನಲ್ಗೆ ಯಾವ ತಂಡ ಹೋಗಲಿದೆ ಎಂಬುದು ತಿಳಿಯಲಿದೆ.
ಓದಿ:ಇಂದು ಅಡಿಲೇಡ್ನಲ್ಲಿ ಭಾರತ - ಆಂಗ್ಲರ ಮಧ್ಯೆ ಕಾದಾಟ.. ಗೆದ್ದವರಿಗೆ ಫೈನಲ್ ಟಿಕೆಟ್