ಬೆಂಗಳೂರು:ಶ್ರೇಯಸ್ ಅಯ್ಯರ್ ಅವರ ಅರ್ಧಶತಕ ಮತ್ತು ಅಕ್ಷರ್ ಪಟೇಲ್, ಜಿತೇಶ್ ಶರ್ಮಾ ಅವರ ಅಮೂಲ್ಯ ರನ್ ಕೊಡುಗೆಯ ಸಹಾಯದಿಂದ ಭಾರತ ಬೆಂಗಳೂರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ನಿಗದಿತ ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದುಕೊಂಡಿ 160 ರನ್ ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಬ್ಬರಿಸಲು ಹೋಗಿ ಯಶಸ್ವಿ ಜೈಸ್ವಾಲ್ ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ಕೆಲವ 15 ಬಾಲ್ ಆಡಿದ ಯಶಸ್ವಿ ಜೈಸ್ವಾಲ್ 2 ಸಿಕ್ಸ್, 1 ಬೌಂಡರಿಯಿಂದ 21 ರನ್ ಗಳಿಸಿದರು. ಅವರ ವಿಕೆಟ್ ಬೆನ್ನಲ್ಲೇ ಇನ್ನೋರ್ವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಸಹ 10 ರನ್ಗೆ ವಿಕೆಟ್ ಕೊಟ್ಟರು. ಇವರ ಬೆನ್ನಲ್ಲೇ ನಾಯಕ ಸೂರ್ಯಕುಮಾರ್ ಯಾದವ್ (5) ಮತ್ತು ರಿಂಕು ಸಿಂಗ್ (6) ಸಹ ವಿಕೆಟ್ ಕಳೆದುಕೊಂಡರು. 10ನೇ ಓವರ್ ವೇಳೆಗೆ ಭಾರತ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದ ಉಪನಾಯಕ ಶ್ರೇಯಸ್ ಅಯ್ಯರ್ ಮಾತ್ರ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಅತ್ತ ವಿಕೆಟ್ ಬೀಳುತ್ತಿದ್ದರು ರನ್ ಗತಿ ಕಡಿಮೆ ಆಗದಂತೆ ಕಾಯ್ದರು. ಇವರಿಗೆ ಸಾಥ್ ನೀಡಿದ್ದು ಐದನೇ ವಿಕೆಟ್ಗೆ ಒಂದಾದ ವಿಕೆಟ್ ಕೀಪರ್ ಜಿತೇಶ್ ಶರ್ಮಾ. ಈ ಜೋಡಿ 43 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡಿತು. ಅಬ್ಬರಿಸಿ ಆಡುತ್ತಿದ್ದ ಜಿತೇಶ್ ಶರ್ಮಾ 16 ಬಾಲ್ನಲ್ಲಿ 3 ಬೌಂಡರಿ ಮತ್ತು 1 ಸಿಕ್ಸ್ನ ಸಹಾಯದಿಂದ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.