ರಾಯಪುರ (ಛತ್ತೀಸ್‌ಗಢ):ರಿಂಕು ಸಿಂಗ್, ಯಶಸ್ವಿ ಜೈಸ್ವಾಲ್, ಜಿತೇಶ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಅವರ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾದ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 174 ರನ್ಗಳ ಗುರಿ ನೀಡಿದೆ. ಇಲ್ಲಿನ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆಸೀಸ್ ಬೌಲಿಂಗ್ ಮಾಡುವ ನಿರ್ಣಯ ಮಾಡಿತು. ಈಗ ಸರಣಿ ಸಮಬಲ ಸಾಧಿಸಲು ಹೆಡ್ ಪಡೆ 175 ರನ್ ಕಲೆಹಾಕಬೇಕಿದೆ.
ಕಳೆದ ಮೂರು ಪಂದ್ಯಗಳಲ್ಲಿ ಆರಂಭ ಮಾಡಿದಂತೆ ಯಶಸ್ವಿ ಜೈಸ್ವಾಲ್ ಇಂದಿನ ಇನ್ನಿಂಗ್ಸ್ನ್ನು ಕಟ್ಟಿದ್ದರು. ಮೊದಲ ಓವರ್ ಮೇಡನ್ ಮಾಡಿದ ಆಸ್ಟ್ರೇಲಿಯಾ ಬಿಗು ಬೌಲಿಂಗ್ ದಾಳಿ ಮಾಡುವ ಸೂಚನೆ ನೀಡಿತು. ಆದರೆ ಎರಡನೇ ಓವರ್ನಿಂದ ಜೈಸ್ವಾಲ್ ತಮ್ಮ ಲಯಕ್ಕೆ ಮರಳಿದರು. ಮೊದಲ ಪವರ್ ಪ್ಲೇ ಅಂತ್ಯಕ್ಕೆ ಹೆಚ್ಚಿನ ಬಾಲ್ ಎದುರಿಸಿದ್ದ ಯಶಸ್ವಿ ಜೈಸ್ವಾಲ್ 28 ಬಾಲ್ನಲ್ಲಿ 6 ಬೌಂಡರಿ ಮತ್ತು 1 ಸಿಕ್ಸ್ನ ಸಹಾಯದಿಂದ 37 ರನ್ ಕಲೆಹಾಕಿ ಔಟ್ ಆದರು. 6 ಓವರ್ ಅಂತ್ಯಕ್ಕೆ ಟೀಮ್ ಇಂಡಿಯಾ 50 ರನ್ ಕಲೆಹಾಕಿತ್ತು.
ಅಯ್ಯರ್, ಸೂರ್ಯ ವಿಫಲ: ಮೊದಲ ವಿಕೆಟ್ ಉರುಳಿದ ಬೆನ್ನಲ್ಲೇ ಮತ್ತಿಬ್ಬರು ಬ್ಯಾಟರ್ಗಳು ರನ್ ಗಳಿಸದೇ ಪೆವಿಲಿಯನ್ ಹಾದಿ ಹಿಡಿದರು. ನಾಲ್ಕನೇ ಪಂದ್ಯಕ್ಕೆ ಉಪನಾಯಕನಾಗಿ ತಂಡ ಸೇರಿಕೊಂಡು ಮೂನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಇಳಿದ ಶ್ರೇಯಸ್ ಅಯ್ಯರ್ 7 ಬಾಲ್ ಎದುರಿಸಿ 8 ರನ್ ಹಾಗೇ ನಾಯಕ ಸೂರ್ಯಕುಮಾರ್ ಯಾದವ್ 2ಬಾಲ್ಗೆ 1 ರನ್ ಗಳಿಸಿ ಔಟ್ ಆದರು. ಇಬ್ಬರು ನಿರೀಕ್ಷೆ ಹುಸಿ ಮಾಡಿದರು. 8ನೇ ಓವರ್ಗೆ 63ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.