ಮೆಲ್ಬೋರ್ನ್: ಆಸ್ಟ್ರೇಲಿಯಾ ಎದುರಿನ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತ ತಂಡ ಮೊದಲ ದಿನದ ಆಟದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಟಿಮ್ ಪೇನ್ ಬಳಗಕ್ಕೆ ರಹಾನೆ ಹುಡುಗರು ಶಾಕ್ ಕೊಟ್ಟಿದ್ದು ಮೊದಲ ದಿನವೇ 195 ರನ್ಗಳಿಗೆ ಸರ್ವ ಪತನ ಕಂಡಿದೆ.
ಓಪನರ್ ಆಗಿ ಕಣಕ್ಕಿಳಿದ ಜೋ ಬರ್ನ್ಸ್ ಹಾಗೂ ಮ್ಯಾಥ್ಯೂ ವೇಡ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಬರ್ನ್ಸ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ಬುಮ್ರಾ ಮೊದಲ ವಿಕೆಟ್ ಉರುಳಿಸಿದರು.
ನಂತರ ಕ್ರೀಸಿಗೆ ಬಂದ ಮಾರ್ನಸ್ ಲಾಬುಶೇನ್, ವೇಡ್ ಜೊತೆ ಸೇರಿ ಕೆಲ ಹೊತ್ತು ಭಾರತದ ಬೌಲರ್ಗಳನ್ನು ದಂಡಿಸಿದರು. ಆದರೆ ಇದಕ್ಕೆ ಕಡಿವಾಣ ಹಾಕಿದ ಅಶ್ವಿನ್, ವೇಡ್ ವಿಕೆಟ್ ಕಬಳಿಸಿದರು. ಜಡೇಜಾ ಅದ್ಭುತ ಕ್ಯಾಚ್ಗೆ ವೇಡ್ ಬಲಿಯಾದರು.
ನಂತರ ಬಂದ ಸ್ಟೀವ್ ಸ್ಮಿತ್ ಕೂಡಾ ಅಶ್ವಿನ್ ಅವರ ಕೈಚಳಕಕ್ಕೆ ಯಾವುದೇ ರನ್ಗಳಿಸದೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಇದಾದ ಬಳಿಕ ಬಂದ ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್ ಜೊತೆ ಸೇರಿ ಅರ್ಧಶತಕದ ಜೊತೆಯಾಟವಾಡಿದರು. ಈ ಜೋಡಿಯನ್ನು ಬುಮ್ರಾ ಬೇರ್ಪಡಿಸಿದರು. ಟ್ರಾವಿಸ್ ಹೆಡ್ (38) ರನ್ಗಳಿಸಿದಾಗ ನಾಯಕ ರಹಾನೆ ಕ್ಯಾಚ್ಗೆ ಅವರು ಬಲಿಯಾದರು.
ಇದಾದ ಕೆಲವೇ ಹೊತ್ತಿನಲ್ಲಿ ಟೀಮ್ ಇಂಡಿಯಾ ಪರ ಮೊದಲ ಟೆಸ್ಟ್ ಆಡುತ್ತಿರುವ ಮೊಹಮ್ಮದ್ ಸಿರಾಜ್ ಮತ್ತೊಮ್ಮೆ ತಂಡಕ್ಕೆ ಬ್ರೇಕ್ ತ್ರೂ ಕೊಟ್ಟರು. ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಮತ್ತೊಬ್ಬ ಆಟಗಾರ ಶುಭಮನ್ ಗಿಲ್ ಕ್ಯಾಚ್ಗೆ ಮಾರ್ನಸ್ ಲಾಬುಶೇನ್ (48) ಪೆವಿಲಿಯನ್ ಹಾದಿ ಹಿಡಿದರು.
ನಾಯಕ ಟಿಮ್ ಪೇನ್ (13) ರನ್ಗಳಿಸಿ ಅಶ್ವಿನ್ಗೆ ವಿಕೆಟ್ ಒಪ್ಪಿಸಿದರು, ಕ್ಯಾಮರೂನ್ ಗ್ರೀನ್ (12) ರನ್ಗಳಿಸಿದಾಗ ಸಿರಾಜ್ ಬೌಲಿಂಗ್ನಲ್ಲಿ ಎಲ್ಬಿಗೆ ಬಲಿಯಾದರು. ಇನ್ನು ಕಮಿನ್ಸ್ 9, ಸ್ಟಾರ್ಕ್ 7, ನಾಥನ್ ಲಯಾನ್ 20, ಹೆಜಲ್ವುಡ್ 4* ರನ್ ಗಳಿಸಿದರು. ಟೀಮ್ ಇಂಡಿಯಾ ಪರ ಬುಮ್ರಾ 4 ವಿಕೆಟ್ ಪಡೆದು ಮಿಂಚಿದರೆ, ಅಶ್ವಿನ್ 3 ಹಾಗೂ ಸಿರಾಜ್ 2, ಜಡೇಜಾ ಒಂದು ವಿಕೆಟ್ ಪಡೆದು ಮಿಂಚಿದರು.
ಓದಿ : ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕಿದು 100ನೇ ಟೆಸ್ಟ್ ಪಂದ್ಯ