ನವದೆಹಲಿ: 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿಯುತ್ತಿದ್ದಂತೆ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತ 5 ಪಂದ್ಯಗಳ ಟಿ20 ಸರಣಿಗೆ ಆತಿಥ್ಯವಹಿಸಲಿದೆ. ಜೂನ್ ತಿಂಗಳಲ್ಲಿ ಈ ಸರಣಿ ನಡೆಯಲಿದೆ.
ಈಗಾಗಲೇ ಬಿಸಿಸಿಐ 15ನೇ ಆವೃತ್ತಿಯ ಐಪಿಎಲ್ ಮುಂಬೈ ಮತ್ತು ಪುಣೆಯಲ್ಲಿ ಮಾರ್ಚ್ 26ರಿಂದ 29ರವರೆಗೆ ನಿಗದಿಯಾಗಿದೆ. ಫೈನಲ್ ಪಂದ್ಯ ಮುಗಿದ 10 ದಿನಗಳ ನಂತರ ಹರಿಣಗಳ ವಿರುದ್ಧ ಟಿ20 ಸರಣಿ ಶುರುವಾಗಲಿದೆ.
ಬುಧವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ವೇಳಾಪಟ್ಟಿಯನ್ನು ನಿರ್ಧರಿಸಲಾಗಿದೆ. ಜೂನ್ 9ರಿಂದ 19ರವರೆಗ 5 ಪಂದ್ಯಗಳು ನಡೆಯುವ ಸಾಧ್ಯತೆಯಿದೆ. ಕಟಕ್, ವಿಶಾಖಪಟ್ಟಣ, ದೆಹಲಿ, ರಾಜ್ ಕೋಟ್ ಮತ್ತು ಚೆನ್ನೈನಲ್ಲಿ ಚುಟುಕು ಕ್ರಿಕೆಟ್ ಸರಣಿ ನಡೆಯಲಿದೆ.
ವರದಿಗಳ ಪ್ರಕಾರ, ಬೆಂಗಳೂರು ಮತ್ತು ನಾಗ್ಪುರದಲ್ಲಿ 5 ಪಂದ್ಯಗಳಲ್ಲಿ 2 ಪಂದ್ಯಗಳು ಆಯೋಜನೆಯಾಗಬೇಕಿತ್ತು. ಆದರೆ ಕಳೆದ ವೆಸ್ಟ್ ಇಂಡೀಸ್ ಸರಣಿಯ ವೇಳೆ ಪ್ರಯಾಣವನ್ನು ತಪ್ಪಿಸುವ ಸಲುವಾಗಿ ಅಹ್ಮದಾಬಾದ್ ಮತ್ತು ಕೋಲ್ಕತ್ತಾದಲ್ಲಿ ಸೀಮಿತ ಓವರ್ಗಳ ಸಂಪೂರ್ಣ ಸರಣಿ ನಡೆಸಿದ್ದರಿಂದ ಕಟಕ್ ಮತ್ತು ವೈಜಾಕ್ ಟಿ20 ಪಂದ್ಯದ ಆಯೋಜನೆ ಕಳೆದುಕೊಂಡಿದ್ದವು. ಈ ಕಾರಣಕ್ಕಾಗಿ ಬಿಸಿಸಿಐ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಆಯೋಜನೆಯನ್ನು ಈ ಕೇಂದ್ರಗಳಿಗೆ ನೀಡಿದೆ ಎನ್ನಲಾಗಿದೆ.
ಕಟಕ್ನಲ್ಲಿ ಮೊದಲ ಪಂದ್ಯ, ನಂತರ ವಿಶಾಖಪಟ್ಟಣ, ದೆಹಲಿ, ರಾಜ್ಕೋಟ್ ಮತ್ತು ಚೆನ್ನೈನಲ್ಲಿ ನಡೆಯಲಿದೆ. ಈ ಸರಣಿಯ ನಂತರ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಪೂರ್ಣಗೊಂಡಿರುವ ಟೆಸ್ಟ್ ಸರಣಿ ಮತ್ತು 6 ವೈಟ್ ಬಾಲ್ ಪಂದ್ಯಗಳನ್ನಾಡಲಿದೆ.
ಇದನ್ನೂ ಓದಿ:ನಾಳೆಯಿಂದ ಮಹಿಳಾ ವಿಶ್ವಕಪ್ ಕ್ರಿಕೆಟ್: ಎಲ್ಲಾ ಪಂದ್ಯಗಳಿಗೂ ಡಿಆರ್ಎಸ್ ಸೌಲಭ್ಯ