ಅಹಮದಾಬಾದ್ (ಗುಜರಾತ್): ಹಿಂದಿನ ಅಂಕಿ - ಅಂಶಗಳು ಮತ್ತು ಗೆಲುವು - ಸೋಲು ನಾಳಿನ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವುಗಳು ಕೇವಲ ಅನುಭವ ಆಗಿರುತ್ತದೆ. 2011ರ ಗೆದ್ದ ತಂಡದಲ್ಲಿ ವಿರಾಟ್ ಆಡಿದ್ದರು. ವಿರಾಟ್ ಅನುಭವ ತಂಡಕ್ಕೆ ಒತ್ತಡ ನಿವಾರಿಸುವಲ್ಲಿ ಸಹಕಾರಿ ಆಗಲಿದೆ. ಕಳೆದ 10 ಪಂದ್ಯಗಳನ್ನು ಏನು ಮಾಡಿದ್ದೇವೋ ಅದನ್ನೇ ಮುಂದುವರೆಸಲು ಇಚ್ಛಿಸುತ್ತೇವೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಂದ್ಯಕ್ಕೂ ಮುನ್ನಾದಿನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
2023ರ ವಿಶ್ವಕಪ್ನಲ್ಲಿ ಮೊದಲ ನಾಲ್ಕು ಪಂದ್ಯದಲ್ಲಿ ಹೊರಗುಳಿದಿದ್ದ ಮೊಹಮ್ಮದ್ ಶಮಿ ಹಾರ್ದಿಕ್ ಪಾಂಡ್ಯ ಅವರ ಗಾಯಗೊಂಡು ತಂಡದಿಂದ ಹೊರಗುಳಿದ ನಂತರ ಹನ್ನೊಂದರ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡರು. ಈ ವಿಶ್ವಕಪ್ನಲ್ಲಿ ಮೊದಲ ಪಂದ್ಯವನ್ನಾಡಿದ ಶಮಿ 5 ವಿಕೆಟ್ ಪಡೆದು ಮಿಂಚಿದರು. ನಂತರ ಶಮಿಯನ್ನು ಹಿಮ್ಮೆಟಿಸಲು ಯಾರಿಂದಲೂ ಆಗಲಿಲ್ಲ. ಸದ್ಯ ಈ ವಿಶ್ವಕಪ್ನಲ್ಲಿ ಹೆಚ್ಚು ವಿಕೆಟ್ ಪಡೆದ ಆಟಗಾರ ಆಗಿದ್ದಾರೆ.
ಬೌಲಿಂಗ್ ಪ್ರದರ್ಶನ ಮೆಚ್ಚಿದ ನಾಯಕ:ಮೊಹಮ್ಮದ್ ಶಮಿಯ ಪ್ರದರ್ಶನದ ಬಗ್ಗೆ ಕೇಳಿದಾಗ ಶರ್ಮಾ,"ಶಮಿ ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ಆಡಿಸುವುದು ಕಠಿಣವಾಗಿತ್ತು. ಆದರೆ ಅವರು ಸಿರಾಜ್ ಮತ್ತು ಬುಮ್ರಾ ತಂಡಕ್ಕೆ ಸಹಾಯ ಮಾಡಲು ತಂಡದಲ್ಲಿದ್ದರು. ಹೊರಗಿದ್ದು ಅವರು ಮಾಡುತ್ತಿದ್ದ ಕೆಲಸಗಳು ತಂಡದ ಆಟಗಾರನಾಗಿ ಅವರ ಗುಣಮಟ್ಟವನ್ನು ತೋರಿಸುತ್ತದೆ. ಅವರಿಗೆ ಒಮ್ಮೆ ಅವಕಾಶ ಸಿಕ್ಕಿತು, ಅದನ್ನು ಸರಿಯಾಗಿ ಬಳಿಸಿಕೊಂಡರು. ನಂತರ ಅವರ ಪ್ರದರ್ಶನವನ್ನು ನಾವೆಲ್ಲರೂ ನೋಡಿದ್ದೇವೆ" ಎಂದರು.
"ಈ ಪಂದ್ಯಾವಳಿಯಲ್ಲಿ ಬೌಲರ್‌ಗಳು ನಮಗೆ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ವೇಗಿಗಳು ಮತ್ತು ಸ್ಪಿನ್ನರ್‌ಗಳು ಅದ್ಭುತವಾಗಿದ್ದಾರೆ. ನಾವು ಡಿಫೆಂಡ್ ಮಾಡುವಾಗ ಬೌಲಿಂಗ್ ಕ್ಷೇತ್ರ ಅತ್ಯುತ್ತಮ ನಿರ್ವಹಣೆ ಮಾಡಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಅತ್ಯುತ್ತಮವಾಗಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ವಿಕೆಟ್ ಕಬಳಿಸಿ ಅದೇ ಕೆಲಸವನ್ನು ಮಾಡಿದ್ದಾರೆ" ಎಂದು ನಾಯಕ ಟೂರ್ನಿಯ ಕೊನೆಯ ಪಂದ್ಯಕ್ಕೂ ಮುನ್ನ ಬೌಲಿಂಗ್ ವಿಭಾಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನೆಟ್ಸ್ನಲ್ಲಿ ಅಶ್ವಿನ್ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ತರಬೇತಿಯಲ್ಲಿ ಹೆಚ್ಚು ಹೊತ್ತು ಕಂಡುಬಂದಿದ್ದರು. ಹೀಗಾಗಿ ಫೈನಲ್ನಲ್ಲಿ ಅವರಿಗೆ ಸ್ಥಾನ ಸಿಗಲಿದೆಯೇ ಎಂದು ಕೇಳಿದ ಪ್ರಶ್ನೆಗೆ,"ಫೈನಲ್ ಪಂದ್ಯವನ್ನು ಆಡುವ ಹನ್ನೊಂದರ ಬಳಗದ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಪಿಚ್ಗೆ ಅನುಗುಣವಾಗಿ ತಂಡದ ಆಯ್ಕೆ ಮಾಡುತ್ತೇವೆ" ಎಂದು ಹೇಳಿದ್ದರು.