ವೆಸ್ಟ್ ಇಂಡೀಸ್ ಪ್ರವಾಸಕ್ಕೆ ರಣಜಿಯಲ್ಲಿ ಸತತ ಮೂರು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಆಟಗಾರ ಸರ್ಫರಾಜ್ ಖಾನ್ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಇತ್ತೀಚೆಗೆ ಪ್ರಶ್ನಿಸಿದ್ದರು. ಅಲ್ಲದೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯ ಮಾನದಂಡ ಕೇವಲ ಐಪಿಎಲ್ ಆಟ ಮಾತ್ರವೇ?, ಹಾಗಾದರೆ ರಣಜಿ ಕ್ರಿಕೆಟ್ ಏಕೆ ಆಡಿಸುತ್ತೀರಿ? ಎಂದು ಅವರು ಗರಂ ಆಗಿದ್ದರು.
ಇದಾದ ನಂತರ, ಆಯ್ಕೆಯ ಮಾನದಂಡದ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಇದರ ಜೊತೆಗೆ ಸರ್ಫರಾಜ್ ಖಾನ್ ಅವರ ಫಿಟ್ನೆಸ್ ಮತ್ತು ಅವರ ವರ್ತನೆಯೂ ಚರ್ಚೆಯಾಗಿದೆ. ರಣಜಿ ಪಂದ್ಯವೊಂದರಲ್ಲಿ ಶತಕ ದಾಖಲಿಸಿದ ನಂತರ ಅವರ ಅಗ್ರೆಸ್ಸಿವ್ ಸಂಭ್ರಮಾಚರಣೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅವರಿಗೆ ನೀಡಲಾಗಿದ್ದ 16.5 ಅಂಕವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.
ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ, ಸರ್ಫರಾಜ್ ಖಾನ್ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗಿಡಲು ಕೇವಲ ಫಿಟ್ನೆಸ್ ಮತ್ತು ಅವರ ವರ್ತನೆ ಕಾರಣವಲ್ಲಎಂದು ತಿಳಿಸಿದ್ದಾರೆ. ಇದರೊಂದಿಗೆ ಇತರೆ ಕೆಲವು ಅಂಶಗಳೂ ಅವರನ್ನು ತಂಡದಿಂದ ಹೊರಗಿಡಲು ಕಾರಣವಾಗಿವೆ. ಫಿಟ್ನೆಸ್ ಮತ್ತು ನಡವಳಿಕೆಯನ್ನು ಬಿಸಿಸಿಐ ಗಮನಿಸಿದೆ ಎಂದು ತಿಳಿಸಿದರು.
ಮುಂಬೈ ಬ್ಯಾಟರ್ ಕಳೆದ ಮೂರು ರಣಜಿ ಋತುಗಳಲ್ಲಿ 2,566 ರನ್ ಗಳಿಸಿದ್ದಾರೆ. 2019-20 ಋತುವಿನಲ್ಲಿ 928 ರನ್, 2022- 23ರಲ್ಲಿ 982 ಮತ್ತು 2022- 23ರ ಋತುವಿನಲ್ಲಿ 656 ರನ್ ಕಲೆಹಾಕಿದ್ದಾರೆ. 25 ವರ್ಷ ವಯಸ್ಸಿನ ಸರ್ಫರಾಜ್ 37 ಪಂದ್ಯಗಳಿಂದ 79.65 ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಅಲ್ಲದೇ ಎರಡು ಬಾರಿ U-19 ವಿಶ್ವಕಪ್ ಆಡಿದ್ದಾರೆ. ಆದರೆ, 42 ಪ್ಲಸ್ ಸರಾಸರಿ ಹೊಂದಿರುವ ರುತುರಾಜ್ ಗಾಯಕ್ವಾಡ್ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.