ಜೋಹಾನ್ಸ್‌ಬರ್ಗ್/ಹೈದರಾಬಾದ್:ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದು, ಇವರ ಬದಲಿಗೆ ಕೆ.ಎಸ್.ಭರತ್ ಅವರನ್ನು ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.
ಮುಂಬರುವ ಟೆಸ್ಟ್ ಸರಣಿಗೆ ಇಶಾನ್ ಕಿಶನ್ರನ್ನು ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ, ವೈಯಕ್ತಿಕ ಕಾರಣಗಳಿಗಾಗಿ ಅವರು ಸರಣಿಯಿಂದ ವಿರಾಮ ಪಡೆಯಲು ಬಯಸಿದ್ದಾರೆ. ಹೀಗಾಗಿ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.
ಎಡಗೈ ಬ್ಯಾಟರ್ ಇಶಾನ್ ಕಿಶನ್ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ ಮಾದರಿಗೆ ಪಾದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ, 25 ವರ್ಷದ ಕಿಶನ್ ಕೇವಲ ಎರಡು ಟೆಸ್ಟ್‌ಗಳನ್ನು ಆಡಿದ್ದಾರೆ. ಅದರಲ್ಲಿ 78 ರನ್ ಗಳಿಸಿದ್ದಾರೆ. ಅಜೇಯ 52 ಅವರ ಗರಿಷ್ಠ ಸ್ಕೋರ್ ಆಗಿದೆ. 30 ವರ್ಷದ ಕೆ.ಎಸ್.ಭರತ್ ಫೆಬ್ರವರಿ 2023ರಲ್ಲಿ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ಗೆ ಎಂಟ್ರಿ ನೀಡಿದ್ದರು.
ಭರತ್ ಇಲ್ಲಿಯವರೆಗೆ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 44 ಗರಿಷ್ಠ ಸ್ಕೋರ್‌ನೊಂದಿಗೆ 129 ರನ್ ಗಳಿಸಿದ್ದಾರೆ. 12 ಕ್ಯಾಚ್‌ಗಳು ಮತ್ತು 1 ಸ್ಟಂಪಿಂಗ್ ಸಹ ಹೊಂದಿದ್ದಾರೆ. ಬ್ಯಾಟಿಂಗ್ನಲ್ಲಿ ವೈಫಲ್ಯ ಕಾಣುತ್ತಿರುವ ಕಾರಣ ಅವರಿಗೆ ಸರಣಿಯಲ್ಲಿ ಅವಕಾಶ ಸಿಗುವುದು ಕಷ್ಟವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಬಾಕ್ಸಿಂಗ್ ಡೇ ಟೆಸ್ಟ್ ಇದ್ದು, ಅದರಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸುವ ಸಾಧ್ಯತೆ ಇದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಡಿಸೆಂಬರ್ 26ರಿಂದ ಆರಂಭವಾಗಲಿದೆ. ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಮೊದಲ ಟೆಸ್ಟ್ ನಡೆಯಲಿದೆ. ಎರಡನೇ ಟೆಸ್ಟ್ ಜನವರಿ 3ರಿಂದ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿದೆ.
ಭಾರತ- ಪರಿಷ್ಕೃತ ಟೆಸ್ಟ್ ತಂಡ:ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಕೆ.ಎಲ್.ರಾಹುಲ್ (ವಿಕೆಟ್-ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್ (ಉಪನಾಯಕ), ಪ್ರಸಿದ್ಧ್ ಕೃಷ್ಣ ಮತ್ತು ಕೆಎಸ್ ಭರತ್ (ವಿಕೆಟ್ ಕೀಪರ್).
ಇದನ್ನೂ ಓದಿ:ಮೊದಲ ಏಕದಿನ ಪಂದ್ಯ: ದ.ಆಫ್ರಿಕಾ ವಿರುದ್ಧ ಭಾರತಕ್ಕೆ 8 ವಿಕೆಟ್ಗಳ ಭರ್ಜರಿ ಜಯ