ಡರ್ಬನ್ (ದಕ್ಷಿಣ ಆಫ್ರಿಕಾ): ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಗೆದ್ದಿರುವ ಉತ್ಸಾಹದಲ್ಲಿರುವ ಟೀಮ್ ಇಂಡಿಯಾದ ಯುವ ಆಟಗಾರರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಭಾನುವಾರ (ಡಿ.10) ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯ ಡರ್ಬನ್ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಯಶಸ್ವಿ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ ಹರಿಣಗಳ ನಾಡಿನಲ್ಲಿಯೂ ಮುಂದುವರೆಸುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
2024ರ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಈ ಸರಣಿ ಭಾರತ ಮತ್ತು ದಕ್ಷಿಣ ಆಫ್ರಿಕಾಕ್ಕೆ ಪ್ರಮುಖವಾಗಿದ್ದು, ತಂಡದಲ್ಲಿ ಹೊಸಬರಿಗೆ ಅವಕಾಶದ ಜೊತೆಗೆ ಕೆಲ ಪ್ರಯೋಗಗಳನ್ನು ಉಭಯ ತಂಡದಲ್ಲಿ ಕಾಣಬಹುದಾಗಿದೆ. ವಿಶ್ವಕಪ್ನಲ್ಲಿ ಗಾಯಕ್ಕೆ ತುತ್ತಾದ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಸರಣಿ ಮಿಸ್ ಮಾಡಿಕೊಂಡರೆ, ಜಸ್ಪ್ರೀತ್ ಬುಮ್ರಾ ವಿರಾಮ ತೆಗೆದುಕೊಂಡಿದ್ದಾರೆ. ಅಲ್ಲದೇ ಏಕದಿನ ವಿಶ್ವಕಪ್ ಆಡಿದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸಹ ಈ ಪ್ರವಾಸದಲ್ಲಿ ವೈಟ್ಬಾಲ್ ಕ್ರಿಕೆಟ್ನಿಂದ ದೂರ ಇದ್ದಾರೆ.
ಯುವ ಪಡೆ: ಭಾರತವು ಟಿ20 ಸರಣಿಗಾಗಿ 17 ಆಟಗಾರರನ್ನು ಆಯ್ಕೆ ಮಾಡಿದೆ. ಇದರಲ್ಲಿ ಆಡುವ 11ರ ಬಳಗದ ಆಯ್ಕೆ ಬಹಳಷ್ಟು ಗೊಂದಲಕ್ಕೆ ಕಾರಣವಾಗಿದೆ. ಮೂವರು ಆರಂಭಿಕರು ಉತ್ತಮ ಲಯದಲ್ಲಿದ್ದಾರೆ. ಯಾವ ಎರಡು ಆಟಗಾರರು ಮೈದಾನಕ್ಕಿಳಿಯುತ್ತಾರೆ ಎಂಬುದು ದೊಡ್ಡ ಪ್ರಶ್ನೆಯೇ ಆಗಿದೆ. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಯಶಸ್ಸು ಸಾಧಿಸಿದ್ದಾರೆ.
ಜೈಸ್ವಾಲ್, ಗಿಲ್ ಮತ್ತು ಗಾಯಕ್ವಾಡ್ ಮೊದಲ ಮೂರು ಸ್ಥಾನವಾದರೆ, ಇಶಾನ್ ಕಿಶನ್ 4ನೇ ಸ್ಥಾನ ಮತ್ತು ನಾಯಕ ಸೂರ್ಯಕುಮಾರ್ ಯಾದವ್ 5ನೇ ಸ್ಥಾನದಲ್ಲಿ ಬಂದರೆ, ತಿಲಕ್ ವರ್ಮಾ, ಶ್ರೇಯಸ್ ಅಯ್ಯರ್, ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಸ್ಥಾನ ವಂಚಿತರಾಗುತ್ತಾರೆ. ಹೀಗಾಗಿ 11ರ ಬಳಗದ ಆಯ್ಕೆ ಕಠಿಣ ಸವಾಲಾಗಿದೆ.