ನವದೆಹಲಿ:ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮಣಿಕಟ್ಟಿನ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ, ಮೊಹಮ್ಮದ್ ಶಮಿ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮತ್ತೆ ತಮ್ಮ ಲಯಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆದ ಶಮಿ, ಈ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸದಲ್ಲಿದ್ದಾರೆ.
ತಂಡದಲ್ಲಿ ಹಿರಿಯ ಸದಸ್ಯನಾಗಿರುವ ಕಾರಣದಿಂದಾಗಿ ಸಹಜವಾಗಿಯೇ ಜವಾಬ್ದಾರಿಯ ಭಾವನೆಗಳು ಸಹಜವಾಗಿಯೇ ಬರುತ್ತವೆ. ಯುವ ಆಟಗಾರರು ಬಯಸಿದರೆ ಯಾವುದೇ ರೀತಿಯ ಸಲಹೆಗಳನ್ನು ನೀಡಲು ನಾನು ಸಿದ್ಧವಿರುವುದಾಗಿಯೂ ಅವರು ತಿಳಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ ಅನುಭವಿ ಬೌಲರ್ಗಳ ದಂಡೇ ಇದೆ. ಮೊಹಮ್ಮದ್ ಶಮಿ ಜೊತೆಗೆ ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್ ಟೀಂ ಇಂಡಿಯಾದ ಅನುಭವಿ ಬೌಲರ್ಗಳಾದರೆ, ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ತಂಡದಲ್ಲಿ ಸ್ಥಾನ ಪಡೆಯಲು ಕಾತುರದಲ್ಲಿದ್ದಾರೆ. ಜೊತೆಗೆ ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್ ಮತ್ತು ಅರ್ಜಾನ್ ನಗ್ವಾಸ್ವಲ್ಲಾ ಮೀಸಲು ಆಟಗಾರರಾಗಿ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಇಂಗ್ಲೆಂಡ್ ಪ್ರವಾಸದ ಬಗ್ಗೆ ಮೊಹಮ್ಮದ್ ಶಮಿ ಸಾಕಷ್ಟು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರವಾಸದಲ್ಲಿ ಭಾರತ ಉತ್ತಮ ಯಶಸ್ಸು ಸಾಧಿಸಲಿದೆ. ಈ ಹಿಂದಿನ ಸರಣಿಗಳಲ್ಲಿ ತೋರಿಸಿದ ಫಾರ್ಮ್ ಅನ್ನು ತಂಡ ಇಲ್ಲಿಯೂ ಮುಂದುವರಿಸಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ನಾವು ತಂಡವಾಗಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದೇವೆ. ಇಂಗ್ಲೆಂಡ್ ಪ್ರವಾಸದ ದೃಷ್ಟಿಯಿಂದ ನಮ್ಮ ಆತ್ಮವಿಶ್ವಾಸ ಸಹಜವಾಗಿಯೇ ತುಂಬಾ ಹೆಚ್ಚಿದೆ. ಕಳೆದ ಆರು ತಿಂಗಳಿನಲ್ಲಿ ನಾವು ತೋರ್ಪಡಿಸಿದ ಪ್ರದರ್ಶನವನ್ನು ಪುನರಾವರ್ತಿಸಲು ನಮ್ಮಿಂದ ಸಾಧ್ಯವಾದರೆ ಈ ಬೇಸಿಗೆ ನಮ್ಮ ಪಾಲಿಗೆ ಶ್ರೇಷ್ಠವಾಗಿರುತ್ತದೆ" ಎಂದು ಶಮಿ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ.