ನವದೆಹಲಿ :ಟೆಸ್ಟ್ ಕ್ರಿಕೆಟ್ ಭವಿಷ್ಯವನ್ನು ಉಳಿಸುವುದಕ್ಕಾಗಿ ವಿಶ್ವದ ಪ್ರಮುಖ ಕ್ರಿಕೆಟಿಗರೆಲ್ಲಾ ಒಂದಾಗಬೇಕು ಮತ್ತು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ನಿಯೋಜಿತ ವಕ್ತಾರರನ್ನಾಗಿ ನೇಮಿಸಿಕೊಳ್ಳಬೇಕೆಂದು ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಕಂಡಂತಹ ಅತ್ಯುತ್ತಮ ನಾಯಕರಲ್ಲಿ ಒಬ್ಬರಾದ ಚಾಪೆಲ್ ಪ್ರಕಾರ, ಟೆಸ್ಟ್ ಆಡುವ ರಾಷ್ಟ್ರಗಳು ಉತ್ತಮ ಕ್ರಿಕೆಟಿಗರನ್ನು ಉತ್ಪಾದಿಸುತ್ತಿಲ್ಲ ಎಂದು ನಂಬಿರುವುದಾಗಿ ತಿಳಿಸಿದ್ದಾರೆ. ಕಾರಣವೆಂದರೆ ಪ್ರಸ್ತುತ ಪೀಳಿಗೆಯ ಆಟಗಾರರು ಕ್ರಿಕೆಟ್ನ ಗುಣಮಟ್ಟವನ್ನು ದುರ್ಬಲಗೊಳಿಸುವ ಚುಟುಕು ಮಾದರಿ ಕ್ರಿಕೆಟ್ಅನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಸಾಧನೆ ಮಾಡಲು ಅಗತ್ಯವಿರುವ ಕೌಶಲ್ಯಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ರೂಢಿಸಿಕೊಳ್ಳಬೇಕು. ನಂತರ ಆಟಗಾರರು ಮುಂದಿನ ಗ್ರೇಡ್ಗಳಿಗೆ ತೇರ್ಗಡೆಯಾಗುತ್ತಿದ್ದಂತೆ ಕಠಿಣ ಸ್ಪರ್ಧೆಗಳಲ್ಲಿ ತಮ್ಮ ಸಾಮರ್ಥ್ಯ ಉತ್ತಮಗೊಳಿಸಿಕೊಳ್ಳಬೇಕು.
ಈ ನಿಟ್ಟಿನಲ್ಲಿ ಸಾಕಷ್ಟು ದೇಶಗಳು ಕ್ರಿಯಾತ್ಮಕ ಅಭಿವೃದ್ಧಿ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಮಾತ್ರ ಇದನ್ನು ಸಾಧಿಸಬಹುದು ಎಂದು ಚಾಪೆಲ್ ಇಎಸ್ಪಿಎನ್ಗೆ ಬರೆದಿರುವ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿಯ ಬದಲಾವಣೆ ನಡೆದರೆ ಮಾತ್ರ ಟೆಸ್ಟ್ ಕ್ರಿಕೆಟ್ ರೋಮಾಂಚನಕಾರಿಯಾಗಿ ಉಳಿಯಲಿದೆ. ಇಲ್ಲವಾದರೆ ಬಳ್ಳಿಯಲ್ಲಿ ಚಿಗುರುವ ಮೊದಲೇ ಒಣಗಿ ಹೋಗುತ್ತದೆ ಎಂದು ಚಾಪೆಲ್ ಬರೆದುಕೊಂಡಿದ್ದಾರೆ.