ಕೋಲ್ಕತ್ತಾ:ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಭಾರತದ ವಿರುದ್ಧ ಸೆಣಸುವ ತಂಡ ಯಾವುದು ಎಂಬ ಪ್ರಶ್ನೆಗೆ ಗುರುವಾರ ರಾತ್ರಿ ಉತ್ತರ ಸಿಕ್ಕಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡದೆದುರು ದಕ್ಷಿಣ ಆಫ್ರಿಕಾ ಛಲದಿಂದ ಹೋರಾಡಿ ಅಂತಿಮವಾಗಿ ನಿರಾಸೆ ಅನುಭವಿಸಿತು. ನಾಕೌಟ್ ಪಂದ್ಯದಲ್ಲಿ ಸೋಲು ಕಂಡು ಚೋಕರ್ಸ್ ಹಣೆಪಟ್ಟಿಯನ್ನು ಮತ್ತಷ್ಟು ಕಾಲ ಹಾಗೆಯೇ ಉಳಿಸಿಕೊಂಡಿತು.
ಪಂದ್ಯದ ಬಳಿಕ ಮಾತನಾಡಿರುವ ದ.ಆಫ್ರಿಕಾ ತಂಡದ ಕೋಚ್ ರಾಬ್ ವಾಲ್ಟರ್, "ಕೊನೆಯ ಹಂತದಲ್ಲಿ ತಂಡ ಸೋಲು ಕಂಡಿತು. ಸೆಮೀಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಮ್ಮ ಪ್ರದರ್ಶನ 'ಚೋಕಿಂಗ್' ನಿಂದ ದೂರವಿತ್ತು. ಆರಂಭದಲ್ಲೇ 24 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿತ್ತು. ಆ ನಂತರ ಡೇವಿಡ್ ಮಿಲ್ಲರ್ ಸಿಡಿಸಿದ ಗೌರವಾನ್ವಿತ ಶತಕದ ನೆರವಿನಿಂದ 212 ರನ್ ಗಳಿಸಲು ಸಾಧ್ಯವಾಯಿತು. ಈ ಗುರಿ ಬೆನ್ನಟ್ಟಲು ಆಸೀಸ್ 47.2 ಓವರ್‌ಗಳನ್ನು ತೆಗೆದುಕೊಂಡಿತು" ಎಂದರು.
'ಚೋಕರ್ಸ್' ಎಂಬ ಪದದ ಕುರಿತು ತಮ್ಮ ವೈಯಕ್ತಿಕ ವ್ಯಾಖ್ಯಾನ ನೀಡಿದ ವಾಲ್ಟರ್, "ನಾವು ಗೆಲ್ಲುವ ಪಂದ್ಯವನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಹೊಸ ನಿದರ್ಶನದಂತೆ ನಾವು ಈ ಪದ (ಚೋಕರ್ಸ್). ಆದರೆ, ಈ ಪಂದ್ಯದಲ್ಲಿ ನಿಜವಾಗಿಯೂ ನಾವು ಹೋರಾಡಿದ್ದೇವೆ. ನಮಗೆ ಸಿಕ್ಕ ಅವಕಾಶಗಳಲ್ಲಿ ಉತ್ತಮ ರನ್ ಕಲೆಹಾಕಿದ್ದೇವೆ" ಎಂದು ಹೇಳಿದರು.
ತಂಡಕ್ಕೆ 30 ರಿಂದ 40 ರನ್ ಕೊರತೆ ಉಂಟಾಯಿತು. ನಾವು ದಿಟ್ಟ ಹೋರಾಟ ನಡೆಸಿ ಆಟಕ್ಕೆ ಮರಳಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ. ಹೆಚ್ಚುವರಿಯಾಗಿ 30 ರನ್ಗಳನ್ನು ತಂಡ ಗಳಿಸಿದ್ದರೆ, ಸಾಕಷ್ಟು ವ್ಯತ್ಯಾಸಗಳಾಗುತ್ತಿತ್ತು. ಈ ಪಂದ್ಯ ಎರಡು ತಂಡಗಳ ನಡುವಿನ ಗಂಭೀರ ಸ್ಪರ್ಧೆಯಾಗಿತ್ತು. ಮೊದಲ 12 ಓವರ್ಗಳು ತಂಡಕ್ಕೆ ಸವಾಲಾಗಿತ್ತು. ಆದರೆ, ಕ್ಲಾಸೆನ್ ಮತ್ತು ಮಿಲ್ಲರ್ ಜೊತೆಗೂಡಿದ ರೀತಿ ನೋಡಿದರೆ, ತಂಡ 270 ರನ್ ಟಾರ್ಗೆಟ್ ಸೆಟ್ ಮಾಡಬಹುದು ಎಂದೆನಿಸಿತು. ಸ್ವಲ್ಪ ಸಮಯದ ನಂತರ 250 ರನ್ಗಳಿಗೆ ಗುರಿ ಮರಿನಿಗದಿಪಡಿಸಿದೆವು. ವಿಶ್ವಕಪ್ ಸೆಮೀಸ್ ಸೋಲಿನಿಂದ ಮನೆಗೆ ಕೊಂಡೊಯ್ಯಲು ನಮಗೆ ಬಹಳಷ್ಟು ಧನಾತ್ಮಕ ಅಂಶಗಳಿವೆ" ಎಂದು ವಿಶ್ಲೇಷಣೆ ಮಾಡಿದರು.
ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ಮಾಡುವಲ್ಲಿ ಕೆಲವು ತಪ್ಪೆಸಗಿದಿರಾ ಎಂಬ ಪ್ರಶ್ನೆಗೆ, ಪಂದ್ಯದ ವೇಳೆ ಮಾತನಾಡುತ್ತಿದ್ದ ಕಾಮೆಂಟೇಟರ್‌ಗಳು ಸಹ, ಮೊದಲ ಐದು ಓವರ್‌ಗಳಲ್ಲಿ ಪಿಚ್ ಹೀಗೇ ಇರುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ನಾವು ಅವರು ನಿರೀಕ್ಷಿಸಿದಂತೆ ಆಡಿದ್ದೇವೆ. ಒಂದೊಮ್ಮೆ ನಮಗೆ 270 ರನ್ ಗಳಿಸಬಹುದು ಎಂದೆನಿಸಿತ್ತು. ಇದೇ ವೇಳೆ, ಸಂಜೆ ಚೆಂಡು ಹೆಚ್ಚು ತಿರುಗುತ್ತಿದ್ದರಿಂದ ಬ್ಯಾಟ್ ಮಾಡಲು ಸ್ವಲ್ಪ ಹಿನ್ನಡೆಯಾಗಬಹುದು ಎಂದು ನಮಗೆ ತಿಳಿದಿತ್ತು. ಅದು ಅಂತಿಮವಾಗಿ ನಿಜವಾಯಿತು" ಎಂದರು.
"ಬೌಲಿಂಗ್ ವಿಭಾಗದಲ್ಲಿ ಪ್ರಬಲವಾಗಿ ಕಾರ್ಯನಿರ್ವಹಿಸಲು ನಾವು ಹೆಚ್ಚು ರನ್ ಹೊಂದಿರಲಿಲ್ಲ. ಹೀಗಿದ್ದರೂ ನಾವು ಗೆಲುವಿಗೆ ಹತ್ತಿರದಲ್ಲಿದ್ದೆವು. ಪ್ರಮುಖ ಬೌಲರ್ ಕಗಿಸೋ ರಬಾಡ ಹಿಮ್ಮಡಿ ನೋವಿನಿಂದ ಬಳಲುತ್ತಿದ್ದರು. ಅದನ್ನು ಮೈದಾನದಲ್ಲಿ ನೀವು ನೋಡಿದ್ದೀರಿ. ಹೀಗಾಗಿ ಅವರಿಂದ ಹೆಚ್ಚಿನ ಪ್ರದರ್ಶನ ನಿರೀಕ್ಷಿಸಲು ಸಾಧ್ಯವಾಗಲಿಲ್ಲ" ಎಂದು ಹೇಳಿದರು.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ದ ಗೆದ್ದ ಕಾಂಗರೂ ಪಡೆ: ಭಾರತದೊಂದಿಗೆ ಭಾನುವಾರ ಫೈನಲ್ ಕದನ