ಲಖನೌ (ಉತ್ತರ ಪ್ರದೇಶ): ಸದೀರ ಸಮರವಿಕ್ರಮ ಮತ್ತು ಪಾತುಮ್ ನಿಸ್ಸಾಂಕ ಅವರ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡ 2023ರ ವಿಶ್ವಕಪ್ನಲ್ಲಿ ತನ್ನ ಚೊಚ್ಚಲ ಗೆಲುವು ದಾಖಲಿಸಿದೆ. ವಿಶ್ವಕಪ್ ಆರಂಭವಾದಾಗಿನಿಂದ ಸತತ ಮೂರು ಸೋಲು ಕಂಡಿದ್ದ ಶ್ರೀಲಂಕಾ ಲಖನೌದ ಎಕಾನಾ ಕ್ರೀಡಾಂಗಣದಲ್ಲಿ ನೆದರ್ಲೆಂಡ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿ ಅಂಕ ಪಟ್ಟಿಯಲ್ಲಿ ಖಾತೆ ತೆರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ ಲೋಗನ್ ವ್ಯಾನ್ ಬೀಕ್ ಮತ್ತು ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಜೋಡಿ ಮಾಡಿದ 130 ರನ್ನ ಜೊತೆಯಾಟದ ನೆರವಿನಿಂದ 263 ಗುರಿಯನ್ನು ಲಂಕಾಗೆ ನೀಡಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭವನ್ನು ಪಡೆಯಲಿಲ್ಲ. ತಂಡ 18 ರನ್ ಗಳಿಸಿದ್ದಾಗ ಕುಸಾಲ್ ಪೆರೆರಾ (5) ವಿಕೆಟ್ ಕಳೆದುಕೊಂಡರು. ಅತ್ತ ಇನ್ನೋರ್ವ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕ ಇನ್ನಿಂಗ್ಸ್ನ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡು ಆಡಿದರು. ಈ ನಡುವೆ ನಾಯಕ ಕುಸಲ್ ಮೆಂಡಿಸ್ (11) ವಿಕೆಟ್ ಕಳೆದುಕೊಂಡರು.
ಅಜೇಯ ಸಮರವಿಕ್ರಮ ಇನ್ನಿಂಗ್ಸ್:ಎರಡು ವಿಕೆಟ್ ಪತನದ ನಂತರ ಪಾತುಮ್ ನಿಸ್ಸಾಂಕ ಮತ್ತು ಸದೀರ ಸಮರವಿಕ್ರಮ ಅರ್ಧಶತಕದ ಜೊತೆಯಾಟ ಆಡಿದ್ದರಿಂದ ತಂಡ ಮತ್ತೊಂದು ಸೋಲಿನ ದವಡೆಯಿಂದ ಹೊರಬಂತು. ಆದರೆ ಅರ್ಧಶತಕ ಗಳಸಿ ಆಡುತ್ತಿದ್ದ ಪಾತುಮ್ ನಿಸ್ಸಾಂಕ (54) ಪಾಲ್ ವ್ಯಾನ್ ಮೀಕೆರೆನ್ ವಿಕೆಟ್ ಕೊಟ್ಟರು. ಆದರೆ ನಂತರ ಚರಿತ್ ಅಸಲಂಕಾ ಮತ್ತು ಧನಂಜಯ ಡಿ ಸಿಲ್ವಾ ಸಮರವಿಕ್ರಮ ಜೊತೆ ಪಾಲುದಾರಿಗೆ ಮಾಡಿದರು. ನಾಲ್ಕನೇ ವಿಕೆಟ್ಗೆ ಸಮರವಿಕ್ರಮ ಮತ್ತು ಚರಿತ್ ಅಸಲಂಕಾ (44) 77 ರನ್ನ ಜೊತೆಯಾಟ, ಐದನೇ ವಿಕೆಟ್ಗೆ ಸಮರವಿಕ್ರಮ ಮತ್ತು ಧನಂಜಯ ಡಿ ಸಿಲ್ವಾ (30) 76 ರನ್ಗಳ ಜೊತೆಯಾಟ ಜಯ ತಂದು ಕೊಟ್ಟಿತು.
ಪಂದ್ಯದಲ್ಲಿ ಅಜೇಯರಾಗಿ ಉಳಿದ ಸದೀರ ಸಮರವಿಕ್ರಮ 107 ಬಾಲ್ ಆಡಿ 7 ಬೌಂಡರಿಯ ಸಹಾಯದಿಂದ 91 ರನ್ನ ತಾಳ್ಮೆಯ ಇನ್ನಿಂಗ್ಸ್ ಕಟ್ಟಿ ಗೆಲುವಿನ ರುವಾರಿಯಾದರು. ನೆದರ್ಲೆಂಡ್ ಪರ ಆರ್ಯನ್ ದತ್ತ್ 3 ಮತ್ತು ಕಾಲಿನ್ ಅಕರ್ಮನ್, ಪಾಲ್ ವ್ಯಾನ್ ಮೀಕೆರೆನ್ ತಲಾ ಒಂದೊಂದು ವಿಕೆಟ್ ಪಡೆದರು. ಶ್ರೀಲಂಕಾಕ್ಕೆ 2023ರ ವಿಶ್ವಕಪ್ನ ಮೊದಲ ಜಯಕ್ಕೆ 91 ರನ್ನ ಅಜೇಯ ಇನ್ನಿಂಗ್ಸ್ನಿಂದ ಕಾರಣರಾದ ಸದೀರ ಸಮರವಿಕ್ರಮ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ:ಮತ್ತೆ ಸಿಡಿದೆದ್ದ ಹರಿಣಗಳು.. ಹೆನ್ರಿಚ್ ಕ್ಲಾಸೆನ್ ಭರ್ಜರಿ ಶತಕ: ಇಂಗ್ಲೆಂಡ್ಗೆ 400 ರನ್ಗಳ ಬೃಹತ್ ಗುರಿ