ಧರ್ಮಶಾಲಾ (ಹಿಮಾಚಲ ಪ್ರದೇಶ):ಏಕದಿನ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾದ ಆಟಗಾರರಲ್ಲಿ ಎರಡು ಬದಲಾವಣೆಗಳು ಆಗಿದ್ದು, ಮೊಹಮ್ಮದ್ ಶಮಿ ಹಾಗೂ ಸೂರ್ಯಕುಮಾರ್ ಯಾದವ್ ಕಣಕ್ಕೆ ಇಳಿಯಲಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ಉಭಯ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ ಆಡಿದ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದಿವೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ತಂಡಗಳಾಗಿ ಮುಂದುವರೆದಿವೆ. ಸೆಮಿಫೈನಲ್ ತಲುಪಲು ಎರಡೂ ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಇಂದಿನ ಪಂದ್ಯದಲ್ಲಿ ಯಾರು ಗೆದ್ದರೂ ಸೆಮೀಸ್ ಪ್ರವೇಶ ಬಹುತೇಕ ಖಚಿತವಾಗಲಿದೆ.
ಭಾರತಕ್ಕೆ ಗೆಲುವು ತವಕ:ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ಮೇಲೆ ನ್ಯೂಜಿಲೆಂಡ್ ಮೈಲುಗೈ ಹೊಂದಿದೆ. ಇಲ್ಲಿಯವರೆಗೆ ಎರಡೂ ತಂಡಗಳು 9 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ನ್ಯೂಜಿಲೆಂಡ್ 5 ಬಾರಿ ಗೆದ್ದಿದ್ದರೆ, ಭಾರತ 3 ಬಾರಿ ಪಂದ್ಯವನ್ನು ಗೆದ್ದಿದೆ. ಉಳಿದಂತೆ 1 ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
2019ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಎರಡೂ ತಂಡಗಳು ಕೊನೆಯದಾಗಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನು 18 ರನ್‌ಗಳಿಂದ ಸೋಲಿಸಿತ್ತು. ಈ ಮೂಲಕ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಹಂತಕ್ಕೆ ಪ್ರವೇಶಿಸುವ ಟೀಂ ಇಂಡಿಯಾದ ಕನಸನ್ನು ನ್ಯೂಜಿಲೆಂಡ್ ಭಗ್ನ ಮಾಡಿತ್ತು. ಹೀಗಾಗಿ ಈ ಪಂದ್ಯದಲ್ಲಿ ಮಣಿಸಿ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಭಾರತ ಇದೆ.