ಮುಂಬೈ (ಮಹಾರಾಷ್ಟ್ರ): ನೆದರ್ಲೆಂಡ್ ವಿರುದ್ಧ ಬ್ಯಾಟಿಂಗ್ ವೈಫಲ್ಯವನ್ನು ಕಂಡಿದ್ದ ದಕ್ಷಿಣ ಆಫ್ರಿಕಾ ಇಂದು (ಶನಿವಾರ) ಮುಂಬೈನ ವಾಂಖೆಡೆ ಮೈದಾನದಲ್ಲಿ ಸುಧಾರಿತ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಹೆನ್ರಿಚ್ ಕ್ಲಾಸೆನ್ ಶತಕ ಹಾಗೂ ರೀಜಾ ಹೆಂಡ್ರಿಕ್ಸ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರ ಅರ್ಧಶತಕದ ಆಟದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ನಿಗದಿತ ಓವರ್ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿಶ್ವಕಪ್ನಲ್ಲಿ ಎರಡನೇ ಜಯ ಸಾಧಿಸಲು 400 ರನ್ಗಳ ಟಾರ್ಗೆಟ್ ಅನ್ನು ಭೇದಿಸಬೇಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ವಿಕೆಟ್ ಪತನದ ಹೊರತಾಗಿಯೂ ಉತ್ತಮ ಪ್ರದರ್ಶನವನ್ನು ನೀಡಿತು. ಎರಡನೇ ವಿಕೆಟ್ ನಂತರ ಪ್ರತಿ ಹಂತದಲ್ಲೂ ಜೊತೆಯಾಟ ನಿರ್ಮಾಣ ಮಾಡಿದ ಕಾರಣ ತಂಡ ಸುರಕ್ಷಿತ ಗುರಿನ್ನು ಎದುರಾಳಿಗೆ ನೀಡಿದೆ.
ವಿಶ್ವಕಪ್ನ ದಕ್ಷಿಣ ಆಫ್ರಿಕಾದ ಮೊದಲೆರಡು ಪಂದ್ಯದಲ್ಲಿ ಶತಕ ಗಳಸಿದ್ದ ಕ್ವಿಂಟನ್ ಡಿ ಕಾಕ್ ಇಂದು 4 ರನ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಡಿ ಕಾಕ್ ಔಟ್ ಆದ ನಂತರ ಎರಡನೇ ವಿಕೆಟ್ಗೆ ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 121 ರನ್ಗಳ ಜೊತೆಯಾಟ ನೀಡಿದರು. ಈ ಜೋಡಿ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿತು. 61 ಬಾಲ್ನಲ್ಲಿ 8 ಬೌಂಡರಿಯ ಸಹಾಯದಿಂದ 60 ರನ್ ಗಳಿಸಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ವಿಕೆಟ್ ಕೊಟ್ಟರೆ, ರೀಜಾ ಹೆಂಡ್ರಿಕ್ಸ್ (85) 15 ರನ್ನಿಂದ ಶತಕ ವಂಚಿತರಾದರು.