ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಗ್ಲೆಂಡ್ ನೀಡಿದ್ದ 338 ರನ್ಗಳ ಬೃಹತ್ ಗುರಿ ನೀಡಿದಾಗಲೇ ಪಾಕಿಸ್ತಾನ ತಂಡ ವಿಶ್ವಕಪ್ನ ಸೆಮೀಸ್ ರೇಸ್ನಿಂದ ಹೊರ ಬಿದ್ದಿತ್ತು. ಮೊದಲ ಎರಡು ವಿಕೆಟ್ ಪತನದ ನಂತರ ಐಸಿಸಿ ಅಧಿಕೃತವಾಗಿ ಬಾಬರ್ ಪಡೆ ವಿಶ್ವಕಪ್ ಸೆಮೀಸ್ ರೇಸ್ನಿಂದ ಹೊರಬಿದ್ದಿದೆ ಎಂದು ಪ್ರಕಟಿಸಿತು. ಪಾಕಿಸ್ತಾನ ವಿರುದ್ಧ ಗೆದ್ದ ಇಂಗ್ಲೆಂಡ್ ಅಂಕ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಭದ್ರ ಪಡಿಸಿಕೊಂಡು, 2025ರ ಚಾಂಪಿಯನ್ಸ್ ಟ್ರೋಫಿಗೆ ತನ್ನ ಸ್ಥಾನವನ್ನು ಖಾತರಿ ಪಡಿಸಿಕೊಂಡಿತು.
ವಿಶ್ವಕಪ್ ಸೆಮೀಸ್ ಪ್ರವೇಶಕ್ಕೆ ಅಚ್ಚರಿಯ ಗೆಲುವನ್ನು ಎದುರು ನೋಡುತ್ತಿದ್ದ ಪಾಕಿಸ್ತಾನ ಟಾಸ್ ಸೋತಿತ್ತು. ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ಜಾನಿ ಬೈರ್‌ಸ್ಟೋವ್ (59), ಜೋ ರೂಟ್ (60) ಮತ್ತು ಬೆನ್ ಸ್ಟೋಕ್ಸ್ (84) ಆಟದ ನೆರವಿನಿಂದ 50 ಓವರ್ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 337 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 43.3 ಓವರ್ಗೆ 244 ರನ್ ಗಳಿಸಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಇದರಿಂದ ಇಂಗ್ಲೆಂಡ್ 93 ರನ್ಗಳ ಗೆಲುವು ದಾಖಲಿಸಿತು.
ಬಾಬರ್ ನಿರೀಕ್ಷೆ ಹುಸಿಗೊಳಿಸಿದ ಫಖರ್:ರನ್ರೇಟ್ ಒತ್ತಡದಲ್ಲಿ ಬೃಹತ್ ಮೊತ್ತವನ್ನು ಬೇಗ ಭೇದಿಸುವ ಬರದಲ್ಲಿದ್ದ ಪಾಕಿಸ್ತಾನ ಆರಂಭಿಕ ವಿಕೆಟ್ಗಳನ್ನು ಕಳೆದುಕೊಂಡಿತು. ನಾಯಕ ಫಾಖರ್ ಜಮಾನ್ ಮೇಲೆ ನಂಬಿಕೆ ಇಟ್ಟಿದ್ದರು. ಆದರೆ, ಫಾಖರ್ ಜಮಾನ್ 9 ಬಾಲ್ ಆಡಿ 1 ರನ್ಗೆ ವಿಕೆಟ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರು. ಇದಕ್ಕೂ ಮುನ್ನ ಅಬ್ದುಲ್ಲಾ ಶಫೀಕ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಪಾಕಿಸ್ತಾನ ವಿಶ್ವಕಪ್ನಿಂದ ಅಧಿಕೃತವಾಗಿ ಹೊರಬಿತ್ತು.