ಮುಂಬೈ (ಮಹಾರಾಷ್ಟ್ರ): ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ವಾಂಖೆಡೆ ಕ್ರಿಡಾಂಗಣದಲ್ಲಿ ಇಬ್ರಾಹಿಂ ಜದ್ರಾನ್ ಅವರು ಅಫ್ಘಾನಿಸ್ತಾನ ಪರ ವಿಶ್ವಕಪ್ ಪಂದ್ಯದಲ್ಲಿ ಶತಕ ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಶತಕಕ್ಕೆ ಸಚಿನ್ ತೆಂಡೂಲ್ಕರ್ ಕಾರಣ ಎಂದು ಇಬ್ರಾಹಿಂ ಜದ್ರಾನ್ ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದ ಮುನ್ನಾದಿನದಂದು ಸಚಿನ್ ತೆಂಡೂಲ್ಕರ್ ಅವರೊಂದಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಟಿಪ್ಸ್ ಪಡೆದುಕೊಂಡಿದ್ದೇನೆ ಎಂದರು. ಅಫ್ಘಾನಿಸ್ತಾನದ ಆಟಗಾರರು ಸೋಮವಾರ ವಾಂಖೆಡೆಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಸಮಯ ಕಳೆದರು.
ಮೊದಲ ಇನ್ನಿಂಗ್ಸ್ ಮುಕ್ತಾಯದ ನಂತರ ಮಾತನಾಡಿದ ಜದ್ರಾನ್,"ನಾನು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಉತ್ತಮವಾದ ಮಾತುಕತೆ ನಡೆಸಿದ್ದೇನೆ. ಅವರು ತಮ್ಮ ಅನುಭವವನ್ನು ಹಂಚಿಕೊಂಡರು ಮತ್ತು ನಾನು ಪಂದ್ಯದ ಮೊದಲು ನಾನು ಸಚಿನ್ ತೆಂಡೂಲ್ಕರ್ ಅವರಂತೆ ಬ್ಯಾಟಿಂಗ್ ಮಾಡುತ್ತೇನೆ ಎಂದು ಹೇಳಿದ್ದೆ. ಅವರು ನನಗೆ ಸಾಕಷ್ಟು ಶಕ್ತಿ ಮತ್ತು ಆತ್ಮವಿಶ್ವಾಸವನ್ನು ನೀಡಿದರು" ಎಂದು ಹೇಳಿದ್ದಾರೆ.
"ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಚೊಚ್ಚಲ ಶತಕವನ್ನು ಗಳಿಸಲು ನನಗೆ ತುಂಬಾ ಸಂತೋಷವಾಗಿದೆ. ನಾನು ಈ ಪಂದ್ಯಾವಳಿಗಾಗಿ ನಿಜವಾಗಿಯೂ ಶ್ರಮಿಸಿದೆ. ಪಾಕಿಸ್ತಾನದ ವಿರುದ್ಧ ಶತಕವನ್ನು ಕಳೆದುಕೊಂಡಿದ್ದೇನೆ, ಆದರೆ ಇಂದು ಅದನ್ನು ಮಾಡಿದೆ. ನಾನು ನನ್ನ ಕೋಚಿಂಗ್ ಸಿಬ್ಬಂದಿಯೊಂದಿಗೆ ಮಾತನಾಡುವಾಗ ಮುಂದಿನ ಮೂರು ಪಂದ್ಯಗಳಲ್ಲಿ ನಾನು ಶತಕ ಗಳಿಸುತ್ತೇನೆ ಎಂದು ಹೇಳಿದ್ದೆ" ಎಂದು ತಿಳಿಸಿದರು.