ದುಬೈ: ಟಿ20 ವಿಶ್ವಕಪ್ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ನಾನು 3ನೇ ಕ್ರಮಾಂಕದಲ್ಲಿ ಆಡಲಿದ್ದೇನೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮುನ್ನ ಖಚಿತಪಡಿಸಿದ್ದಾರೆ.
ಈಗಾಗಲೆ ರೋಹಿತ್ ಶರ್ಮಾ ಮೊದಲ ಆರಂಭಿಕರಾಗಿದ್ದಾರೆ. ಆದರೆ, ಇವರೊಂದಿಗೆ ಇನ್ನಿಂಗ್ಸ್ ಆರಂಭಿಸುವವರ್ಯಾರು ಎನ್ನುವ ಕುತೂಹಲ ಹಲವು ದಿನಗಳಿಂದ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆಮಾಡಿತ್ತು. ಏಕೆಂದರೆ ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆ ರಾಹುಲ್ ಕಳಪೆ ಫಾರ್ಮ್ನಲ್ಲಿದ್ದರು. ಆ ಸಂದರ್ಭದಲ್ಲಿ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿ ಭರ್ಜರಿ ಪ್ರದರ್ಶನ ತೋರಿದ್ದರು. ಮುಂಬರುವ ವಿಶ್ವಕಪ್ನಲ್ಲಿ ನಾನೇ ಇನ್ನಿಂಗ್ಸ್ ಆರಂಭಿಸಬಹುದು ಎಂದಿದ್ದರು. ಆದರೆ, ಪ್ರಸ್ತುತ ರಾಹುಲ್ ಅಮೋಘ ಫಾರ್ಮ್ನಲ್ಲಿರುವ ರಾಹುಲ್ರನ್ನು ಕಡೆಗಣಿಸುವುದು ಕಷ್ಟ ಎಂದಿದ್ದಾರೆ.
ಐಪಿಎಲ್ಗೆ ಮುನ್ನ ವಿಷಯಗಳೇ ಬೇರೆಯಾಗಿತ್ತು, ಈಗ ಅಗ್ರ ಕ್ರಮಾಂಕದಲ್ಲಿ ರಾಹುಲ್ರನ್ನು ಮೀರಿ ಹೋಗುವುದು ತುಂಬಾ ಕಷ್ಟದ ವಿಷಯ. ರೋಹಿತ್ ವಿಶ್ವ ದರ್ಜೆಯ ಆಟಗಾರ, ಅವರು ಅಗ್ರಕ್ರಮಾಂಕಕ್ಕೆ ಎಂದಿಗೂ ಮೊದಲ ಆಯ್ಕೆಯಾಗಿರುತ್ತಾರೆ. ನಾನು 3ನೇ ಕ್ರಮಾಂಕದಲ್ಲಿ ಆಡಲಿದ್ದೇನೆ. ಸದ್ಯಕ್ಕೆ ಇದೊಂದು ವಿಷಯವನ್ನು ಮಾತ್ರ ನಾನು ಈ ಸಂದರ್ಭದಲ್ಲಿ ಬಹಿರಂಗಪಡಿಸ ಬಲ್ಲೆ ಎಂದು ಇಂಗ್ಲೆಂಡ್ ವಿರುದ್ಧ ಪಂದ್ಯದ ಟಾಸ್ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕೆಎಲ್ ರಾಹುಲ್ 2021ರ ಐಪಿಎಲ್ನಲ್ಲಿ 628 ರನ್ಗಳಿಸಿದ್ದಾರೆ. ಅವರು ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟರ್ ಮತ್ತು ಗರಿಷ್ಠ ರನ್ಗಳಿಕೆಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಭಾರತ ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಇದನ್ನುಓದಿ:ಅರ್ಥಪೂರ್ಣ ದೀಪಾವಳಿ ಆಚರಿಸಲು ಟಿಪ್ಸ್ ಕೊಡ್ತೇನೆ ಎಂದು ಟ್ರೋಲ್ಗೆ ತುತ್ತಾದ ಕೊಹ್ಲಿ