ರಾಜ್‌ಕೋಟ್ (ಗುಜರಾತ್): ದೇಶೀಯ ಕ್ರಿಕೆಟ್ ವಿಜಯ್ ಹಜಾರೆ ಟ್ರೋಫಿಯ ಚೊಚ್ಚಲ ಫೈನಲ್ ಪ್ರವೇಶಿಸಿದ ಹರಿಯಾಣ ಕ್ರಿಕೆಟ್ ತಂಡ ಇತಿಹಾಸವನ್ನು ಬರೆದಿದೆ. ಅಗ್ರ ಕ್ರಮಾಂಕದ ಬ್ಯಾಟರ್ ಹಿಮಾಂಶು ರಾಣಾ ಅವರ ನಾಲ್ಕನೇ ಶತಕ ಮತ್ತು ವೇಗಿ ಅನ್ಶುಲ್ ಕಾಂಬೋಜ್ ಅವರ ನಾಲ್ಕು ವಿಕೆಟ್‌ಗಳ ನೆರವಿನಿಂದ ಐದು ಬಾರಿಯ ಚಾಂಪಿಯನ್ ತಮಿಳುನಾಡು ತಂಡವನ್ನು 63 ರನ್‌ಗಳಿಂದ ಸೋಲಿಸುವ ಮೂಲಕ ಹರಿಯಾಣ ತನ್ನ ಚೊಚ್ಚಲ ವಿಜಯ್ ಹಜಾರೆ ಟ್ರೋಫಿ ಫೈನಲ್‌ಗೆ ಪ್ರವೇಶಿಸಿತು.
ತಮಿಳುನಾಡು ವಿರುದ್ಧದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹರ್ಯಾಣ ತಂಡದ ನಾಯಕ ಅಶೋಕ್ ಮೆನಾರಿಯಾ, ರನ್ ಕೋಟೆ ಕಟ್ಟುವ ಉತ್ಸಾಹದೊಂದಿಗೆ ಇನಿಂಗ್ಸ್ ಆರಂಭಿಸಿದರು. ತಂಡಕ್ಕೆ ಆರಂಭಿಕ ಆಟಗಾರ ಯುವರಾಜ್ ಸಿಂಗ್ ನಿರೀಕ್ಷೆಯಂತೆ ಉತ್ತಮ ಭದ್ರ ಬುನಾದಿ ಹಾಕಿದರು. 79 ಎಸೆತಗಳನ್ನು ಎದುರಿಸಿದ ಯುವರಾಜ್, 1 ಸಿಕ್ಸ್ ಹಾಗೂ 7 ಬೌಂಡರಿಗಳ ಸಹಿತ 65 ರನ್ ಬಾರಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಿಮಾಂಶು ರಾಣಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಎದುರಾಳಿ ತಂಡದ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ರಾಣಾ 118 ಎಸೆತಗಳಲ್ಲಿ ಅಜೇಯ 116 ರನ್‌ಗಳನ್ನು ಸಿಡಿಸಿ ಪಂದ್ಯದ ಹೀರೋ ಆದರು. ಅಂತಿಮ ಹಂತದಲ್ಲಿ 30 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿಗಳ ಸಹಿತ ಸುಮಿತ್ ಕುಮಾರ್ 48 ರನ್ ಬಾರಿಸಿದರು. ಇದರೊಂದಿಗೆ ಹರ್ಯಾಣ ತಂಡವು 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 293 ರನ್ ಕಲೆಹಾಕಿತು. 294 ರನ್ಗಳ ಗುರಿ ಬೆನ್ನತ್ತಿದ ವಿಕೆಟ್‌ಕೀಪರ್ ಕಂ ಬ್ಯಾಟರ್ ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು 47.1 ಓವರ್‌ಗಳಲ್ಲಿ 230 ರನ್‌ಗಳಿಗೆ ಆಲೌಟ್ ಆಯಿತು. ಉತ್ತಮ ಆರಂಭ ಮಾಡುವಲ್ಲಿ ಎಡವಿದ ತಂಡ ಕೊನೆವರೆಗೂ ಸುಧಾರಣೆ ಕಾಣಲೇ ಇಲ್ಲ.