ಕಾನ್ಪುರ: ಕ್ರಿಕೆಟ್ನಲ್ಲಿ ಗಾಯ ಸಂಭವಿಸುವುದು ಸಾಮಾನ್ಯ. ಆದರೆ ಗಾಯಗೊಂಡಿದ್ದರಿಂದ ತಂಡದಿಂದ ಹೊರಬಿದ್ದಿದ್ದ ಆಟಗಾರನೊಬ್ಬ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವುದೆಂದರೇ ಅದು ನಿಜಕ್ಕೂ ದೊಡ್ಡ ಸಾಧನೆ ಎಂದರೆ ತಪ್ಪಾಗಲಾರದು.
ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯದ ವೇಳೆ ಬಿದ್ದು ಭುಜದ ಗಾಯಕ್ಕೆ ಒಳಗಾಗಿದ್ದ ಶ್ರೇಯಸ್ ನಂತರ ಮೈದಾನದಿಂದ ಸಾಕಷ್ಟು ಸಮಯ ಹೊರಗುಳಿದಿದ್ದರು. ಇಂಗ್ಲೆಂಡ್ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಈ ವೇಳೆ ಮೊದಲಾರ್ಧದ ಐಪಿಎಲ್ ಮತ್ತು ರಾಯಲ್ ಲಂಡನ್ ಏಕದಿನ ಟ್ರೋಫಿಯಲ್ಲಿ ಆಡುವುದನ್ನೂ ತಪ್ಪಿಸಿಕೊಂಡಿದ್ದರು.
ಆದರೆ ದ್ವಿತೀಯಾರ್ಧದ ಐಪಿಎಲ್ಗೂ ಮುನ್ನ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು. ನಂತರ ಡೆಲ್ಲಿ ಕ್ಯಾಪಿಟಲ್ಸ್ ಪರ ಯುಎಇಯಲ್ಲಿ ನಡೆದ ದ್ವಿತೀಯ ಹಂತದ ಐಪಿಎಲ್ನಲ್ಲಿ ಆಡಿದರು. ಫಿಟ್ನೆಸ್ ಕಂಡುಕೊಂಡ ನಂತರ ಟಿ20 ವಿಶ್ವಕಪ್ ತಂಡದಲ್ಲೂ ಮೀಸಲು ಆಟಗಾರನಾಗಿ ಅವಕಾಶ ಪಡೆದರು. ಅದಾದ ನಂತರ ಇತ್ತೀಚೆಗೆ ಮುಗಿದ ಕಿವೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲೂ ಭಾರತ ತಂಡದ ಪರ ಆಡಿದರು.