ಸಿಡ್ನಿ:ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯಕ್ಕೆ ಮೂರು ದಿನ ಇರುವಾಗಲೇ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾತ್ಗೆ ಕೋವಿಡ್ ತಗುಲಿದೆ. ಪಿಂಕ್ ಟೆಸ್ಟ್ ಪಂದ್ಯ ಇದಾಗಿದ್ದು, 2008ರಲ್ಲಿ ಸ್ತನ ಕ್ಯಾನ್ಸರ್‌ನಿಂದ ನಿಧನರಾದ ಮೆಕ್‌ಗ್ರಾತ್ ಅವರ ಪತ್ನಿ ಜೇನ್ ಅವರ ನೆನಪಿಗಾಗಿ ಎಸ್‌ಸಿಜಿಯಲ್ಲಿ ವಾರ್ಷಿಕವಾಗಿ ಪಿಂಕ್ ಟೆಸ್ಟ್ ಆಯೋಜಿಸಲಾಗುತ್ತದೆ.
ಕೋವಿಡ್ ವೈರಸ್ನಿಂದಾಗಿ ಮಹತ್ವದ ಪಂದ್ಯದಲ್ಲಿ ಪಾಲ್ಗೊಳ್ಳುವಿಕೆಯಿಂದ ಮೆಕ್‌ಗ್ರಾತ್ ವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ. ಆಸ್ಟ್ರೇಲಿಯಾದಲ್ಲಿ 2022ರ ಮೊದಲ ಟೆಸ್ಟ್ ಪಂದ್ಯ ಇದಾಗಿದ್ದು, ಪ್ರಮುಖವಾಗಿ ಮೆಕ್‌ಗ್ರಾತ್ ಫೌಂಡೇಶನ್ ನಿಧಿಸಂಗ್ರಹಿಸಿ ಈ ಮಾರಕ ಕಾಯಿಲೆಯಿಂದ ಬಳಲುತ್ತಿರುವವರ ಕುಟುಂಬ ಮತ್ತು ಅವರನ್ನು ಪಾಲನೆ ಮಾಡುವ ದಾದಿಯರಿಗೆ ಸಹಾಯ ಮಾಡುತ್ತದೆ.
ಜನವರಿ 5ರಿಂದ ಆರಂಭವಾಗಲಿರುವ ಪಿಂಕ್ ಟೆಸ್ಟ್ ಪಂದ್ಯದ ಮೂರನೇ ದಿನವನ್ನು 'ಜೇನ್ ಮೆಕ್‌ಗ್ರಾತ್ ಡೇ' (ಜನವರಿ 7) ಎಂದು ಕರೆಯಲಾಗುತ್ತದೆ. ಮೂರನೇ ದಿನದ ವೇಳೆಗೆ ಮೆಕ್ಗ್ರಾತ್ಗೆ ನೆಗೆಟಿವ್ ಬಂದರೆ ಮಾತ್ರ ಅವರು ಪಾಲ್ಗೊಳ್ಳಲಿದ್ದಾರೆ. ಇಲ್ಲದಿದ್ದರೆ ಅವರು ವರ್ಚುವಲ್ ಮೂಲಕ ಭಾಗವಹಿಸಲಿದ್ದಾರೆ.