ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ):ಇಲ್ಲಿನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೆ.ಎಲ್.ರಾಹುಲ್ ನೇತೃತ್ವದ ಭಾರತ ಗೆಲುವಿನ ನಗೆ ಬೀರಿದೆ. ಹರಿಣ ಬಳಗ ನೀಡಿದ 117 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಕೇವಲ 16.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ದ.ಆಫ್ರಿಕಾ ಪರ ವಿಯಾನ್ ಮುಲ್ಡರ್ ಹಾಗು ತಬ್ರೈಜ್ ಶಮ್ಸಿ ತಲಾ ಒಂದು ವಿಕೆಟ್ ಪಡೆದರು.
ಚೇಸಿಂಗ್ ಆರಂಭಿಸಿದ ಭಾರತ ಆರಂಭದಲ್ಲಿ ರುತುರಾಜ್ ಗಾಯಕ್‌ವಾಡ್ (5) ವಿಕೆಟ್ ಕಳೆದುಕೊಂಡಿತ್ತು. ನಂತರ ಕ್ರೀಸಿನಲ್ಲಿ ಒಂದಾದ ಸಾಯಿ ಸುದರ್ಶನ್ (55*) ಮತ್ತು ಶ್ರೇಯಸ್ ಅಯ್ಯರ್ (52) ಶತಕದ ಜೊತೆಯಾಟವಾಡಿದರು. ತಾಳ್ಮೆಯುತ ಆಟದ ಮೂಲಕ ಸುಲಭ ಗುರಿ ಚೇಸ್ ಮಾಡುತ್ತಿದ್ದಂತೆ, ಗೆಲುವಿಗೆ 6 ರನ್ಗಳು ಬೇಕಿದ್ದಾಗ ತಬ್ರೈಜ್ ಶಮ್ಸಿ ಬೌಲಿಂಗ್ನಲ್ಲಿ ಶ್ರೇಯಸ್ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಸಾಯಿ ಸುದರ್ಶನ್ ಜೊತೆಗೂಡಿದ ತಿಲಕ್ ವರ್ಮಾ (1) ಪಂದ್ಯ ಮುಗಿಸಿದರು.
ಅರ್ಷದೀಪ್ ಸಿಂಗ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಚೊಚ್ಚಲ 5 ವಿಕೆಟ್ ಸಾಧನೆ ಮಾಡಿದರು. ಅವೇಶ್ ಖಾನ್ 4 ವಿಕೆಟ್ ಉರುಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಪಂದ್ಯವಾಡಿದ ಸಾಯಿ ಸುದರ್ಶನ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.
ಟಾಸ್ ಗೆದ್ದ ದ.ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ರೀಜಾ ಹೆಂಡ್ರಿಕ್ಸ್ ಮತ್ತು ಟೋನಿ ಡಿ ಜೋರ್ಜಿ ಜೋಡಿ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಅರ್ಷದೀಪ್ ಅವರ ಮೊದಲ ಓವರ್ನ ನಾಲ್ಕನೇ ಎಸೆತದಲ್ಲಿ ರೀಜಾ ಹೆಂಡ್ರಿಕ್ಸ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಬಳಿಕ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (0) ಕೂಡ ಅರ್ಷದೀಪ್‌ಗೆ ವಿಕೆಟ್ ಒಪ್ಪಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.