ನವದೆಹಲಿ: 14ನೇ ಆವೃತ್ತಿಯ ಐಪಿಎಲ್ಅನ್ನು ಮುಂದೂಡಿರುವುದರಿಂದ ಭಾರತದಲ್ಲಿ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ 2021ರ ಟಿ20 ವಿಶ್ವಕಪ್ ನಡೆಸುವುದಕ್ಕೆ ನೇರ ಪರಿಣಾಮ ಬೀರುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ಭಾರತದಲ್ಲಿ ಕೋವಿಡ್ 19 ಸಾಂಕ್ರಾಮಿಕ ಬಿಕ್ಕಟ್ಟಿನಿಂದ 14ನೇ ಆವೃತ್ತಿಯ ಐಪಿಎಲ್ ಮುಂದೂಡಿದೆ. ಆದರೆ ಇದೇ ವರ್ಷದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ಅನ್ನು ದೇಶದಲ್ಲಿ ಆಯೋಜಿಸಲು ಸೂಕ್ತವೇ ಅಥವಾ ವಿದೇಶಕ್ಕೆ ವರ್ಗಾಯಿಸುವುದೇ ಎಂಬುದರ ಕುರಿತು ಜುಲೈನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ನಾವು ಇಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡುತ್ತಿದ್ದೇವೆ ಮತ್ತು ಈ ಹಂತದಲ್ಲಿ ಕಾದು ನೋಡುವುದು ಉತ್ತಮ ಪರಿಹಾರ ಎಂದು ನಾವು ನಿರ್ಧರಿಸಿದ್ದೇವೆ. ಜುಲೈಗಿಂತಲೂ ಮೊದಲು ಇದರ ಬಗ್ಗೆ ಏನೂ ಹೇಳಲಾಗುವುದಿಲ್ಲ. ಏಕೆಂದರೆ ಇದು ವಿಶ್ವಕಪ್, ಹಾಗಾಗಿ ವಾರಗಳಲ್ಲಿ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮುಂಬರುವ ದಿನಗಳಲ್ಲಿ ಇಲ್ಲಿನ ಪರಿಸ್ಥಿತಿ ಸುಧಾರಿಸಿಕೊಳ್ಳಲಿದೆ ಎಂದು ನಮಗೆ ವಿಶ್ವಾಸವಿದ್ದು, ವಿಶ್ವಕಪ್ ಯೋಜನೆಯಂತೆ ಮುಂದುವರಿಯಲಿದೆ. ನಾವು ಆಯ್ಕೆ ಮಾಡಿರುವ 9 ಸ್ಥಳಗಳಲ್ಲಿ ಯಾವುದೇ ಸ್ಥಳವನ್ನು ಖಚಿತಪಡಿಸಿಕೊಂಡಿಲ್ಲ. ದೇಶಾದ್ಯಂತ ಇನ್ನೂ ಕೆಲವು ಸ್ಥಳಗಳನ್ನು ಹೆಚ್ಚುವರಿ ಸ್ಥಳಗಳಾಗಿ ಸಿದ್ಧಪಡಿಸಿಕೊಳ್ಳಲಿದ್ದೇವೆ. ಏಕೆಂದರೆ ಪ್ರಮುಖ ಟೂರ್ನಿಯ ಸಮಯಕ್ಕೆ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರದಿದ್ದರೆ, ಕೆಲವೇ ನಿರ್ದಿಷ್ಟ ರಾಜ್ಯಕ್ಕೆ ಮೂಲಸೌಕರ್ಯದ ವಿಚಾರದಲ್ಲಿ ಹೊರೆಯಾಗುವುದನ್ನು ತಡೆಯಬಹುದು ಎಂದು ತಿಳಿಸಿದ್ದಾರೆ.
ಇದನ್ನು ಓದಿ:Mr.Nags ಜೊತೆ ಶಿವಣ್ಣನ 'ಹೊಡಿ ಮಗಾ..' ಸಾಂಗ್ ಹಾಡಿದ ಮ್ಯಾಕ್ಸ್‌ವೆಲ್