ಅಹಮದಾಬಾದ್ (ಗುಜರಾತ್):ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಇಂದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ನಡೆಸಿದೆ. ವಿಶ್ವಕಪ್ ಅಭಿಯಾನದ 36ನೇ ಪಂದ್ಯ ಇದಾಗಿದ್ದು ಅಹ್ಮದಾಬಾದ್ನ ನರೇಂದ್ರ ಮೋದಿ ಮೈದಾನದ ಆತಿಥ್ಯ ವಹಿಸಿಕೊಂಡಿದೆ.
ಸೆಮಿಫೈನಲ್ ದೃಷ್ಟಿಯಿಂದ ಭಾರಿ ಕುತೂಹಲ ಮೂಡಿಸಿರುವ ಪಂದ್ಯ ಇದಾಗಿದೆ. ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಕಾಂಗರೂ ಪಡೆಯನ್ನು ತಮ್ಮ ಬೌಲಿಂಗ್ ಪರಾಕ್ರಮದಿಂದ ಬಹುಬೇಗ ಕಟ್ಟಿಹಾಕುವ ರಣತಂತ್ರದಲ್ಲಿ ಆಂಗ್ಲರಿದ್ದರೆ, ಬೃಹತ್ ಮೊತ್ತ ಕಲೆ ಹಾಕುವ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾ ತಂಡವಿದೆ.
ಆಸ್ಟ್ರೇಲಿಯಾ ಆಡಿರುವ 6 ಪಂದ್ಯಗಳಲ್ಲಿ 2 ಸೋತರೆ, 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೂರರ ಸ್ಥಾನ ನಡೆದಿದೆ. ಆದರೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಬಾರಿಯ ಕಳಪೆ ಆಟದಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿದೆ. ಈವರೆಗೆ ತಾನು ಆಡಿರುವ 6 ಪಂದ್ಯಗಳಲ್ಲಿ 1 ಮಾತ್ರ ಗೆದ್ದುಕೊಂಡು ಉಳಿದ 5 ಪಂದ್ಯಗಳನ್ನು ಕೈಚೆಲ್ಲಿದೆ. ಸೆಮಿಯಿಂದ ಭಾಗಶಃ ಹೊರಬಿದ್ದಿರುವ ಆಂಗ್ಲರು, ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ನೇರಪ್ರವೇಶ ಗಿಟ್ಟಿಸಿಕೊಳ್ಳುವ ಒತ್ತಡದಲ್ಲಿದೆ. ಆಂಗ್ಲರ ಪಾಲಿಗೆ ಈ ಪಂದ್ಯ ನಿರ್ಣಾಯಕವಾಗಿದ್ದು ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳುವುದು ಖಚಿತ.