ಚೆನ್ನೈ: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಿಂದಲೇ ಚೆಪಾಕ್ ಪಿಚ್ ಗಂಭೀರ ತಿರುವು ನೀಡಲಿದೆ ಎಂದು ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ ನಿರೀಕ್ಷಿಸಿದ್ದಾರೆ. ಮುಂದಿನ ಪಂದ್ಯವನ್ನು ಗೆದ್ದು ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೇರುವ ವಿಶ್ವಾಸದಲ್ಲಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ದಾಖಲೆಯ 420 ರನ್ಗಳ ಗುರಿ ಬೆನ್ನಟ್ಟಿದ ಭಾರತ ಇಂಗ್ಲೆಂಡ್ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿದ್ದಲ್ಲದೇ, 227 ರನ್ಗಳ ಸೋಲನುಭವಿಸಿದರು. ತಾಜಾ ಪಿಚ್ ಮತ್ತು ಒಣಗಿರುವ ಕಾರಣ ನಾಳೆಯ ಪಂದ್ಯ ಸ್ಪಿನ್ನರ್‌ಗಳ ಸ್ವರ್ಗ ಎಂಬ ಭರವಸೆ ಮೂಡಿಸಿದೆ.
ಇದನ್ನೂ ಓದಿ...ಇಂಡೋ - ಆಂಗ್ಲರ 2ನೇ ಟೆಸ್ಟ್: ಭಾರತಕ್ಕೆ ನಿರ್ಣಾಯಕ ಪಂದ್ಯ
ಪಿಚ್ ಸಂಪೂರ್ಣ ವಿಭಿನ್ನವಾಗಿ ಕಾಣುತ್ತದೆ. ಮೊದಲ ದಿನದಿಂದಲೇ ಪಿಚ್ ಪ್ರಮುಖ ಪರಿಣಾಮ ಬೀರಲಿದೆ ಎಂದು ನನಗೆ ಖಾತ್ರಿಯಿದೆ. ಆದರೆ, ಮೊದಲ ಸೆಷನ್‌ನಲ್ಲಿ ಅದು ಹೇಗಿರಲಿದೆ ಎಂಬುದನ್ನು ನೋಡಬೇಕು. ಮೊದಲ ಟೆಸ್ಟ್‌ನಲ್ಲಿ ಏನಾಯಿತು ಎಂಬುದನ್ನು ನಾವು ಮರೆಯಬೇಕಾಗಿದೆ. ಪರಿಸ್ಥಿತಿ ಅರಿತಿದ್ದೇವೆ ಎಂದು ಶುಕ್ರವಾರ ನಡೆದ ವರ್ಚುಯಲ್ ಸಭೆಯಲ್ಲಿ ರಹಾನೆ ಹೇಳಿದರು.
ಎಡಗೈ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಆಯ್ಕೆಗೆ ಲಭ್ಯ ಎಂದು ಸುಳಿವು ನೀಡಿದ್ದರೂ, ರಹಾನೆ ಮಾತ್ರ ಆಡುವ 11ರ ಹೆಸರು ಬಹಿರಂಗಪಡಿಸಲಿಲ್ಲ. ಅಕ್ಷರ್ ಫಿಟ್ ಆಗಿದ್ದಾರೆ. ನಾಳೆ ಯಾರು ಆಡಲಿದ್ದಾರೆ ಎಂಬ ವಿಷಯವನ್ನು ಈಗಲೇ ಹೇಳುವುದಿಲ್ಲ. ಎಲ್ಲಾ ಸ್ಪಿನ್ನರ್ಗಳೂ ಉತ್ತಮ ಪ್ರದರ್ಶನ ತೋರಬಲ್ಲರು ಎಂದರು.
ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಎಲ್ಲಾ ಸ್ಪಿನ್ನರ್‌ಗಳು ವಿಶೇಷವಾಗಿ ಅಶ್ವಿನ್ ನಿಜವಾಗಿಯೂ ಉತ್ತಮ ಬೌಲಿಂಗ್ ನಿರ್ವಹಣೆ ಮಾಡಿದರು ಎಂದರು. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.