ಆಕ್ಲೆಂಡ್ : ಕೋವಿಡ್-19ನಿಂದ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿ ಮತ್ತೆ ಭಾರತದಲ್ಲಿ ನಡೆಯುವುದು ಅನುಮಾನ. ಆದರೆ, ಟೂರ್ನಮೆಂಟ್ ಪುನರಾರಂಭಗೊಂಡರೆ ಖಂಡಿತ ನಾನು ಬರುತ್ತೇನೆ ಎಂದು ನ್ಯೂಜಿಲ್ಯಾಂಡ್ ಆಲ್ರೌಂಡರ್ ಜಿಮ್ಮಿ ನೀಶಮ್ ಹೇಳಿದ್ದಾರೆ.
ಒಂದು ವೇಳೆ ಐಪಿಎಲ್ ಮತ್ತೆ ಶುರುವಾದರೆ, ಅದು ಭಾರತದಲ್ಲಿ ಎಂಬುದರ ಬಗ್ಗೆ ನನಗೆ ಅನುಮಾನವಿದೆ. ಯಾಕೆಂದರೆ, ಈಗಾಗಲೇ ಇದೇ ವರ್ಷ ನಡೆಯಬೇಕಿರುವ ಟಿ20 ವಿಶ್ವಕಪ್ ಭಾರತದಿಂದ ಬೇರೆಡೆಗೆ ಸ್ಥಳಾಂತರಿಸಲು ಯೋಜನೆ ಮಾಡಲಾಗುತ್ತಿದೆ.
ಐಪಿಎಲ್ ಪುನಾರಾರಂಭದ ಬಗ್ಗೆ ಅವರು ತುಂಬಾ ಜಾಗರೂಕರಾಗಿರುತ್ತಾರೆ ಎಂದು ನ್ಯೂಜಿಲ್ಯಾಂಡ್ ಮಾಧ್ಯಮವೊಂದಕ್ಕೆ ನೀಶಮ್ ತಿಳಿಸಿದ್ದಾರೆ.
"ಐಪಿಎಲ್ ಈ ರೀತಿ ಆಗಬಹುದೆಂಬುದರ ಬಗ್ಗೆ ಅರಿತುಕೊಂಡೇ ನಾನು ಒಪ್ಪಂದ ಮಾಡಿಕೊಂಡಿದ್ದೆ. ಇದೊಂದು ಬಾಧ್ಯತೆ ಎಂದು ನಾನು ಭಾವಿಸಿದ್ದೆ. ಅಲ್ಲಿಗೆ ಹೋಗಲು ಬದ್ಧತೆಯನ್ನು ಮಾಡಿದ್ದೆ ಮತ್ತು ಟೂರ್ನಿ ಸಂಪೂರ್ಣವಾಗಿ ಮುಗಿಯುವವರೆಗೂ ಏನೇ ಆದರೂ ವೈಯಕ್ತಿತವಾಗಿ ಹಿಂದೆ ಸರಿಯುವ ಯಾವುದೇ ಆಲೋಚನೆ ಮಾಡಿರಲಿಲ್ಲ" ಎಂದು ಜಿಮ್ಮಿ ನೀಶಮ್ ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ಆಲ್ರೌಂಡರ್ರನ್ನು 50 ಲಕ್ಷ ರೂಪಾಯಿಗಳಿಗೆ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಮುಂಬೈ ಆಡಿದ್ದ 7 ಪಂದ್ಯಗಳಲ್ಲಿ ಒಮ್ಮೆ ಮಾತ್ರ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ತೋರಿರಲಿಲ್ಲ.