ಸೆಂಚುರಿಯನ್:ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎರಡೂ ತಂಡಗಳ ಬ್ಯಾಟರ್ಗಳು ರನ್ ಗಳಿಸಲು ಪರದಾಡುತ್ತಿದ್ದರೂ ಕೆಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅವರು ಇದಕ್ಕೆಲ್ಲಾ ತಾವೂ ಅಳವಡಿಸಿಕೊಂಡಿರುವ ತಾಳ್ಮೆ ಮತ್ತು ಶಿಸ್ತೇ ಕಾರಣ ಎಂದು ಹೇಳಿದ್ದಾರೆ.
ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ರಾಹುಲ್ 2019 ವೆಸ್ಟ್ ಇಂಡೀಸ್ ಪ್ರವಾಸದ ನಂತರ ಟೆಸ್ಟ್ ತಂಡದಿಂದ ಹೊರಬಿದ್ದಿದ್ದರು. ಆದರೆ, ಬ್ಯಾಟಿಂಗ್ನಲ್ಲಿ ಹಲವಾರು ಬದಲಾವಣೆ ಮಾಡಿಕೊಂಡ ಅವರು 2020ರಲ್ಲಿ ಸೀಮಿತ ಓವರ್ಗಳ ಸರಣಿ ಮತ್ತು ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಸೀಮಿತ ಓವರ್ಗಳಲ್ಲಿ ಸಾಕಷ್ಟು ರನ್ಗಳಿಸಿದ ಕರ್ನಾಟಕದ ಬ್ಯಾಟರ್ ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದರು.
ಕಮ್ಬ್ಯಾಕ್ ಮಾಡಿದ ಮೊದಲ ಪಂದ್ಯದಲ್ಲಿ 84 ರನ್ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ನಂತರದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ 129 ರನ್ ಸಿಡಿಸಿದ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತವರಿನಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ನಲ್ಲಿ ಗಾಯದ ಕಾರಣ ಆಡದಿದ್ದರೂ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೆ ಶತಕ ಸಿಡಿಸಿ ಮಿಂಚಿದ್ದಾರೆ.
ಇದನ್ನೂ ಓದಿ:ದ.ಆಫ್ರಿಕಾ ವಿರುದ್ಧ ಜಯ... ನಾಯಕನಾಗಿ ಹಲವು ದಾಖಲೆಗಳಿಗೆ ಪಾತ್ರರಾದ ಕಿಂಗ್ ಕೊಹ್ಲಿ