ಜಾರ್ಜ್‌ಟೌನ್ (ಗಯಾನಾ):ಸೂರ್ಯ, ತಿಲಕ್ ವರ್ಮಾ ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯಾರ ಅಬ್ಬರದ ಆಟಕ್ಕೆ ಭಾರತ ವಿಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಜಯ ದಾಖಲಿಸಿತು. ಸೂರ್ಯ ಕುಮಾರ್ ಯಾದವ್ 188ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 83 ರನ್ ಗಳಿಸಿದ್ದು ಮತ್ತು ಅವರ ಜೊತೆಗೆ ತಿಲಕ್ ವರ್ಮಾ ವಿಕೆಟ್ ಕಾಯ್ದುಕೊಂಡು ಜೊತೆಯಾಟ ಆಡಿದ್ದು ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದೆ.
ಆದರೆ ಪಂದ್ಯದ ಗೆಲುವಿನ ನಂತರ ಹಾರ್ದಿಕ್ ಪಾಂಡ್ಯರ ನಡೆ ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಪಂದ್ಯದ ಗೆಲುವಿಗೆ 2 ರನ್ ಬೇಕಿದ್ದಾಗ ಇನ್ನೂ ಎರಡು ಓವರ್ 2 ಬಾಲ್ ಬಾಕಿ ಇತ್ತು. ಸ್ಟ್ರೈಕ್ನಲ್ಲಿದ್ದ ಹಾರ್ದಿಕ್ ಪಾಂಡ್ಯ 14 ರನ್ ಗಳಿಸಿದ್ದರೆ, ನಾನ್ ಸ್ಟ್ರೈಕ್ ಎಂಡ್ನಲ್ಲಿದ್ದ ತಿಲಕ್ ವರ್ಮಾ 49 ರನ್ ಗಳಿಸಿ ಕ್ರೀಸ್ನಲ್ಲಿದ್ದರು. ಹಾರ್ದಿಕ್ ಪಾಂಡ್ಯ 17.5ನೇ ಬಾಲ್ನ್ನು ಸಿಕ್ಸ್ ಹೊಡೆದು ವಿನ್ನಿಂಗ್ಸ್ ಶಾಟ್ನಿಂದ ಪಂದ್ಯವನ್ನು ಗೆಲ್ಲಿಸುತ್ತಾರೆ. ಇತ್ತ 49 ರನ್ ಗಳಿಸಿದ್ದ ತಿಲಕ್ಗೆ ಒಂದು ರನ್ಗೆ ಅವಕಾಶ ಮಾಡಿಕೊಟ್ಟಿದ್ದರೆ ಪಾದಾರ್ಪಣೆ ಮಾಡಿದ ಸರಣಿಯ ಮೂರನೇ ಪಂದ್ಯದಲ್ಲಿ ಎರಡನೇ ಅರ್ಧಶತಕ ದಾಖಲಾಗುತ್ತಿತ್ತು.
ಯುವ ಆಟಗಾರನಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಯಾದರೂ ಈ ನಡೆ ಮುಖ್ಯವಾಗುತ್ತದೆ. ಬಿಟ್ಟುಕೊಡುವುದನ್ನೂ ಕಲಿತಾಗ ಮಾತ್ರ ಒಬ್ಬ ನಾಯಕನಾಗಿ ರೂಪುಗೊಳ್ಳಲು ಸಾಧ್ಯ. ಈ ಹಿಂದೆ ಧೊನಿ ಮತ್ತು ವಿರಾಟ್ ಅವಕಾಶ ನೀಡಿರುವ ವಿಡಿಯೋ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ. ಅಲ್ಲದೇ ಇತ್ತೀಚೆಗೆ ನಡೆದ ಐಪಿಎಲ್ನಲ್ಲಿ ಸಂಜು ಸ್ಯಾಮ್ಸನ್ ಅರ್ಧಶತಕ ಮಾಡಿಕೊಳ್ಳದೇ ಜೈಸ್ವಾಲ್ ಶತಕ ಪೂರೈಸಲು ಕ್ರೀಸ್ ಬಿಟ್ಟುಕೊಟ್ಟ ನಡೆಯನ್ನೂ ನೆಟ್ಟಿಗರು ಪೋಸ್ಟ್ ಮಾಡಿ ಒಬ್ಬ ನಾಯಕ ಹೀಗೆ ವರ್ತಿಸಬೇಕು ಎಂದು ಒಕ್ಕಣೆ ಬರೆದಿದ್ದಾರೆ.
2014ರ ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಗೆಲುವಿಗೆ ಆರು ರನ್ ಬೇಕಾಗಿದ್ದಾಗ 4ನೇ ವಿಕೆಟ್ ಆಗಿ ರೈನಾ ವಿಕೆಟ್ನ್ನು ಭಾರತ ಕಳೆದುಕೊಳ್ಳುತ್ತದೆ. 6ನೇ ವಿಕೆಟ್ ಆಗಿ ಧೋನಿ ಮೈದಾನಕ್ಕಿಳಿಯುತ್ತಾರೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ದಾಖಲಿಸಿ ಮೈದಾನದಲ್ಲಿರುತ್ತಾರೆ. ಈ ಪಂದ್ಯದಲ್ಲಿ ಗೆಲುವಿಗೆ ಒಂದು ರನ್ ಬೇಕಿದ್ದಾಗ ವಿರಾಟ್ ಧೋನಿಗೆ ಮ್ಯಾಚ್ ಫಿನಿಶ್ ಮಾಡುವಂತೆ ಕ್ರೀಸ್ ಬಿಟ್ಟುಕೊಡುತ್ತಾರೆ. ಆದರೆ ಧೋನಿ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಮಾಡಿದ ಕೊಹ್ಲಿಗೇ ವಿನ್ನಿಂಗ್ ಶಾಟ್ ಹೊಡೆಯುವಂತೆ ಹೇಳುತ್ತಾರೆ. ಇದಕ್ಕಾಗಿ ಧೋನಿ ಸುಲಭದ ಎರಡು ಬಾಲ್ನ್ನು ಡಾಟ್ ಮಾಡಿ ಮುಂದಿನ ಓವರ್ನಲ್ಲಿ ವಿರಾಟ್ಗೆ ಕ್ರೀಸ್ ಬಿಟ್ಟುಕೊಡುತ್ತಾರೆ. ಕೊಹ್ಲಿ ಬೌಂಡರಿ ಗಳಿಸಿ ಮ್ಯಾಚ್ ವಿನ್ ಮಾಡಿದ್ದರು.