ಮುಂಬೈ:ಎರಡನೇ ಟಿ20 ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ವಿರುದ್ಧ ಆಸ್ಟ್ರೇಲಿಯಾ ತಂಡ ಆರು ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದೆ. ಜನವರಿ 6ರಂದು ನಡೆದ ಮೊದಲ ಮೊದಲ ಪಂದ್ಯದಲ್ಲಿ ಭಾರತ 9 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಈಗ ಅಂತಿಮ ಟಿ20 ಪಂದ್ಯ ಜನವರಿ 9ರಂದು ನಡೆಯಲಿದ್ದು, ಕುತೂಹಲ ಕೆರಳಿಸಿದೆ.
ನವಿ ಮುಂಬೈನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆಸೀಸ್ ನಾಯಕಿ ಅಲಿಸ್ಸಾ ಹೀಲಿ ಟಾಸ್ ಗೆದ್ದು ಟೀಂ ಇಂಡಿಯಾಕ್ಕೆ ಬ್ಯಾಟಿಂಗ್ ಆಹ್ವಾನಿಸಿದ್ದರು. ಇದರಿಂದ ನಿಗದಿತ 20 ಓವರ್ಗಳಲ್ಲಿ ಭಾರತೀಯ ಆಟಗಾರ್ತಿಯರು ಎಂಟು ವಿಕೆಟ್ ಕಳೆದುಕೊಂಡು 130 ರನ್ಗಳನ್ನು ಪೇರಿಸಲಷ್ಟೇ ಶಕ್ತರಾದರು. ಈ ಗುರಿಯನ್ನು ಕಾಂಗರೂ ಪಡೆ 19 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಮೊದಲ ಬ್ಯಾಟ್ ಮಾಡಿದ ಭಾರತೀಯ ಆಟಗಾರ್ತಿಯರು ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾದರು. ಆಸೀಸ್ನ ಶಿಸ್ತಿನ ಬೌಲಿಂಗ್‌ಗೆ ಬೇಗ ವಿಕೆಟ್ ಒಪ್ಪಿಸಿದರು. ಮೊದಲು ಪಂದ್ಯದಲ್ಲಿ 64 ರನ್ಗಳನ್ನು ಸಿಡಿಸಿ ಮಿಂಚಿದ್ದ ಶಫಾಲಿ ವರ್ಮಾ ಹೆಚ್ಚು ಹೊತ್ತು ನಿಲ್ಲದೇ ನಿರಾಸೆ ಮೂಡಿಸಿದರು. ಕೇವಲ ಒಂದು ರನ್ ಗಳಿಸಿದ ಶಫಾಲಿ ಇನ್ನಿಂಗ್ಸ್ನ ಎರಡನೇ ಓವರ್ನಲ್ಲಿ ಕಿಮ್ ಗಾರ್ತ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.