ಒಮಾನ್: ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಬಹ್ರೇನ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ದೀಪಿಕಾ ರಸಾಂಗಿಕಾ ಕೇವಲ 66 ಎಸೆತಗಳಲ್ಲಿ 161 ರನ್ಗಳನ್ನು ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಮಹಿಳಾ ಆಟಗಾರರೊಬ್ಬರು ಇಷ್ಟೊಂದು ರನ್ ಬಾರಿಸಿದ್ದು ಇದೇ ಮೊದಲು!. ಒಮಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಜಿಸಿಸಿ ಮಹಿಳಾ ಟಿ-20 ಚಾಂಪಿಯನ್ಶಿಪ್ನಲ್ಲಿ ದೀಪಿಕಾ ರಸಾಂಗಿಕಾ ಇಂತಹ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಸೌದಿ ಅರೇಬಿಯಾ ವಿರುದ್ಧದ ಪಂದ್ಯದಲ್ಲಿ ದೀಪಿಕಾ ರಸಾಂಗಿಕಾ 66 ಎಸೆತಗಳಲ್ಲಿ 161 ರನ್ ಬಾರಿಸಿದ್ದಾರೆ. ಈ ಮೂಲಕ ಆಸ್ಪ್ರೇಲಿಯಾದ ಮಹಿಳಾ ಕ್ರಿಕೆಟರ್ ಅಲಿಸ್ಸಾ ಹ್ಯಾಲಿ (ಗರಿಷ್ಠ 148 ರನ್) ಹೆಸರಲ್ಲಿದ್ದ ದಾಖಲೆಯನ್ನು 38 ವರ್ಷದ ರಸಾಂಗಿಕಾ ಮುರಿದಿದ್ದಾರೆ. ದೀಪಿಕಾ ರಸಾಂಗಿಕಾ ಬ್ಯಾಟಿಂಗ್ನ ವಿಶೇಷ ಮತ್ತು ಅಚ್ಚರಿ ಎಂದರೆ ಒಟ್ಟಾರೆ 31 ಫೋರ್ಗಳನ್ನು ಅವರು ಸಿಡಿಸಿದ್ದಾರೆ. ಅಂದರೆ 124 ರನ್ಗಳನ್ನು ಈ ಫೋರ್ಗಳ ಮೂಲಕವೇ ಅವರು ಕಲೆ ಹಾಕಿದ್ದಾರೆ. ಇನ್ನೊಂದು ಅಚ್ಚರಿ ಎಂದರೆ 66 ಎಸೆತಗಳನ್ನು ಎದುರಿಸಿ 31 ಫೋರ್ಗಳನ್ನು ಬಾರಿಸಿರುವ ಅವರ ಬ್ಯಾಟ್ನಿಂದ ಒಂದೇ ಒಂದು ಸಿಕ್ಸ್ ಮೂಡಿ ಬಂದಿಲ್ಲ.