ಹೈದರಾಬಾದ್:ತೆಲುಗಿನ 'ಬುಟ್ಟ ಬೊಮ್ಮಾ' ಹಾಡಿಗೆ ಹೆಂಡತಿ-ಮಕ್ಕಳೊಂದಿಗೆ ಕುಣಿದಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಇದೀಗ ಮತ್ತೆ ಅಭಿಮಾನಿಗಳನ್ನು ಮನರಂಜಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟೀವ್ ಆಗಿರುವ ವಾರ್ನರ್, ಈ ಬಾರಿ ಕಿತಾಪತಿ ಕೆಲಸವನ್ನು ಮಾಡಿ ನಗಿಸಿದ್ದಾರೆ. ಬಾಲಿವುಡ್ ನಟಿ ಆಲಿಯಾ ಭಟ್ ಜೊತೆ ವಾರ್ನರ್ ಡ್ಯಾನ್ಸ್ ಮಾಡಿದ್ರಾ ಅಂದುಕೊಂಡವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಡೇವಿಡ್ ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೇಸ್ ಸ್ವಾಪ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮುಖದ ಮೇಲೆ ತಮ್ಮ ಮುಖ ಬರುವಂತೆ ಎಡಿಟ್ ಮಾಡಿದ್ದಾರೆ. ಫೇಸ್ ಸ್ವಾಪ್ ವಿಡಿಯೋ ಮಾಡಲು ಟೈಗರ್ ಶ್ರಾಫ್ ಹಾಗೂ ಆಲಿಯಾ ಭಟ್ ಹೆಜ್ಜೆ ಹಾಕಿರುವ 'ಸ್ಟೂಡೆಂಟ್ ಆಫ್ ದಿ ಇಯರ್ 2' ಸಿನಿಮಾದ 'ಹುಕ್ ಅಪ್' (Hook Up) ಹಾಡಿನ ತುಣುಕನ್ನು ವಾರ್ನರ್ ಬಳಸಿಕೊಂಡಿದ್ದಾರೆ.
ವಾರ್ನರ್ ಪೋಸ್ಟ್ಗೆ ಬ್ರೆಟ್ ಲೀ, ಅಲೆಕ್ಸ್ ಕ್ಯಾರಿ ಪ್ರತಿಕ್ರಿಯೆ
ಸಿಕ್ಸ್ ಪ್ಯಾಕ್ ಟೈಗರ್ ಶ್ರಾಫ್ ದೇಹಕ್ಕೆ ವಾರ್ನರ್ ಮುಖ ಅಂಟಿಸಿರುವ ಈ ವಿಡಿಯೋಗೆ #whoami #india #song ಎಂಬ ಶೀರ್ಷಿಕೆಯನ್ನ ಡೇವಿಡ್ ವಾರ್ನರ್ ನೀಡಿದ್ದಾರೆ. ಇವರ ಈ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದು, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಹಾಗೂ ಕ್ರಿಕೆಟಿಗ ಅಲೆಕ್ಸ್ ಕ್ಯಾರಿ ಕೂಡ ಲಾಫಿಂಗ್ ಇಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ.