ಹೈದರಾಬಾದ್:ಟೀಂ ಇಂಡಿಯಾದ ಅದ್ಭುತ ಆಟಗಾರ, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕನ ಸ್ಥಾನಕ್ಕೂ ದಿಢೀರ್ ರಾಜೀನಾಮೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲು ಕಂಡ ಬೆನ್ನಲ್ಲೇ 33 ವರ್ಷದ ವಿರಾಟ್ ಕೊಹ್ಲಿ ತಮ್ಮ ನಿರ್ಧಾರವನ್ನು ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದಾರೆ.
ಭಾವನಾತ್ಮಕ ಪತ್ರ ಬರೆದ ವಿರಾಟ್..
'ಇಷ್ಟು ದೀರ್ಘಾವಧಿವರೆಗೆ ನನ್ನ ದೇಶವನ್ನ ಮುನ್ನಡೆಸಲು ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅದಕ್ಕಿಂತಲೂ ಮುಖ್ಯವಾಗಿ ಆರಂಭದ ದಿನದಿಂದಲೂ ತಂಡದ ಹಿತದೃಷ್ಟಿಯಿಂದ ಎಂತಹ ಪರಿಸ್ಥಿತಿಯಲ್ಲೂ ನನ್ನ ಕೈ ಬಿಡದ ಆಟಗಾರರಿಗೆ ಧನ್ಯವಾದಗಳು' ಎಂದಿದ್ದಾರೆ.
'ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು 7 ವರ್ಷಗಳ ಕಠಿಣ ಪರಿಶ್ರಮ, ನಿರಂತರ ಪ್ರಯತ್ನದ ದಿನವಾಗಿದೆ. ನನಗೆ ನೀಡಿರುವ ಕೆಲಸವನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಪ್ರತಿಯೊಂದೂ ಕೊನೆಗೊಳ್ಳಬೇಕು. ಇದೀಗ ಭಾರತ ಟೆಸ್ಟ್ ನಾಯಕನಾಗಿ ಕೊನೆಗೊಳ್ಳಬೇಕಾಗಿದೆ' ಎಂದಿದ್ದಾರೆ.
2014ರಲ್ಲಿ ಟೆಸ್ಟ್ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ವಿರಾಟ್ ಕೊಹ್ಲಿಗೆ ಆ ಜವಾಬ್ದಾರಿ ನೀಡಲಾಗಿತ್ತು. 2014ರಿಂದ 2022ರ ಅವಧಿಯಲ್ಲಿ ಒಟ್ಟು 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ಮುನ್ನಡೆಸಿರುವ ಡೆಲ್ಲಿ ಡ್ಯಾಶರ್ 40 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಕ್ಯಾಪ್ಟನ್ ಆಗಿ ಶೇ. 58.82ರಷ್ಟು ಗೆಲುವಿನ ದಾಖಲೆ ಹೊಂದಿದ್ದಾರೆ.
2014ರಲ್ಲಿ ಟೆಸ್ಟ್ ತಂಡದ ನಾಯಕನಾಗಿದ್ದ ವಿರಾಟ್
2018-19ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಜಯ ಸಾಧಿಸುವ ಮೂಲಕ ಭಾರತಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲೂ ಜಯಭೇರಿ ಭಾರಿಸಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ಅವರ ಆಸೆ ಮಾತ್ರ ಈಡೇರಲಿಲ್ಲ. ಇದರ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿದ್ದಾರೆ.
ಐಸಿಸಿ ಟಿ-20 ವಿಶ್ವಕಪ್ ಮುಗಿಯುತ್ತಿದ್ದಂತೆ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ನಿಂದ ಕೆಳಗಿಳಿಯುವುದಾಗಿ ಘೋಷಿಸಿ, ನಾಯಕತ್ವದಿಂದ ಹೊರಬಂದಿದ್ದರು. ಇದರ ಬೆನ್ನಲ್ಲೇ ಅವರನ್ನ ಏಕದಿನ ನಾಯಕತ್ವದಿಂದಲೂ ಕೆಳಗಿಳಿಸಿ ಆ ಸ್ಥಾನಕ್ಕೆ ರೋಹಿತ್ ಶರ್ಮಾ ಅವರನ್ನ ಆಯ್ಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ವಿರಾಟ್ ಪಡೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಸರಣಿ ಮುಗಿಯುತ್ತಿದ್ದಂತೆ ಡೆಲ್ಲಿ ಡ್ಯಾಶರ್ ಈ ನಿರ್ಧಾರ ಪ್ರಕಟಿಸಿದ್ದಾರೆ.