ಚೆನ್ನೈ (ತಮಿಳುನಾಡು):ಆಸ್ಟ್ರೇಲಿಯಾ ವಿರುದ್ಧ ಈಚೆಗಷ್ಟೇ ಏಕದಿನ ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಭಾರತ ಕ್ರಿಕೆಟ್ ತಂಡ, ಅದೇ ತಂಡದ ವಿರುದ್ಧ ಭಾನುವಾರ (ಅಕ್ಟೋಬರ್ 8) ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಕಾಂಗರೂ ಪಡೆಯನ್ನು ರೋಹಿತ್ ಅಂಡ್ ಟೀಂ ಎದುರಿಸಲಿದೆ. ಶುಭ್ಮನ್ ಗಿಲ್ಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಅವರ ಬದಲಿಗೆ ಇಶಾನ್ ಕಿಶನ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಅತ್ತ ಆಸ್ಟ್ರೇಲಿಯಾ ಕೂಡ ಗಾಯಗೊಂಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್ ಫಿಟ್ ಆಗಿದ್ದು, ಗೆಲುವಿನ ಶುಭಾರಂಭ ಕಾಣಲು ಎರಡೂ ತಂಡಗಳು ಎದುರು ನೋಡುತ್ತಿವೆ.
ಸ್ಪಿನ್ ಮತ್ತು ಬ್ಯಾಟಿಂಗ್ಗೆ ನೆರವಾಗುವ ಚೆಪಾಕ್ ಪಿಚ್ನಲ್ಲಿ ಭಾರತ ಮೂವರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿದರೂ ಆಶ್ಚರ್ಯವಿಲ್ಲ. ತಂಡದ ಸ್ಪಿನ್ ಟ್ರಂಪ್ ಕಾರ್ಡ್ ಆಗಿರುವ ಕುಲದೀಪ್ ಯಾದವ್, ಆಲ್ರೌಂಡರ್ ರವೀಂದ್ರ ಜಡೇಜಾ ಜೊತೆಗೆ ಅಕ್ಷರ್ ಪಟೇಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಕೆಳಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್ಗೆ ಮಣೆ ಹಾಕಿದಲ್ಲಿ ಅಶ್ವಿನ್ ಹೊರಗುಳಿಯುವ ಸಾಧ್ಯತೆಯಿದೆ.
ಗಿಲ್ ಬದಲಿಗೆ ಕಿಶನ್?:ಜ್ವರದಿಂದ ಬಳಲುತ್ತಿರುವ ಗಿಲ್ ನಾಳಿನ ಪಂದ್ಯಕ್ಕೆ ಗೈರಾಗುವ ಸಾಧ್ಯತೆ ಇದೆ. ಒಂದು ವೇಳೆ ಗಿಲ್ ಆಡದಿದ್ದಲ್ಲಿ ಎಡಗೈ ಬ್ಯಾಟರ್ ಇಶಾನ್ ಕಿಶನ್, ನಾಯಕ ರೋಹಿತ್ ಜೊತೆಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ತಂಡದ ಬ್ಯಾಟಿಂಗ್ ಆಧಾರವಾಗಿರುವ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಬ್ಯಾಟಿಂಗ್ ಬಲ ತುಂಬಲಿದ್ದಾರೆ.
ಬೌಲಿಂಗ್ನಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಿರುವ, ವಿಶ್ವದ ನಂಬರ್ 1 ವೇಗಿ ಮೊಹಮದ್ ಸಿರಾಜ್ ತಂಡದ ಮೊದಲ ಆಯ್ಕೆ. ಜೊತೆಗೆ ಗಾಯದಿಂದ ಚೇತರಿಸಿಕೊಂಡು ಗಮನಾರ್ಹ ಪ್ರದರ್ಶನ ನೀಡಿರುವ ಜಸ್ಪ್ರೀತ್ ಬೂಮ್ರಾ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ. ಮೂರನೇ ಆಯ್ಕೆಯ ವೇಗಿಯಾಗಿ ಶಾರ್ದೂಲ್ ಇದ್ದು, ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಿದೆ.
ಚೆಪಾಕ್ನಲ್ಲಿ ನಡೆಯುತ್ತಾ ಸ್ಪಿನ್ ಕಮಾಲ್ :ಎಂಎ ಚಿದಂಬರಂ ಕ್ರೀಡಾಂಗಣ ಸ್ಪಿನ್ ಬೌಲರ್ಗಳಿಗೆ ಹೇಳಿಮಾಡಿಸಿದಂತಿದ್ದು, ಭಾರತ ಸ್ಪಿನ್ ವಿಭಾಗ ಅದರ ಪೂರ್ಣ ಲಾಭ ಪಡೆಯಬೇಕಿದೆ. ಸ್ಪಿನ್ ತ್ರಯರಾದ ಅಶ್ವಿನ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಆಸೀಸ್ ಮೇಲೆ ತಮ್ಮ ಅಸ್ತ್ರಗಳನ್ನು ಪ್ರಯೋಗಿಸಬೇಕಿದೆ. ಟೀಂ ಇಂಡಿಯಾ ಈಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದ್ದು, 5 ವಿಶ್ವಕಪ್‌ಗಳ ವಿಜೇತ ಆಸೀಸ್ ವಿರುದ್ಧ ಭಾರತೀಯರು ಉತ್ತಮ ಹೋರಾಟ ನಡೆಸಲಿದ್ದಾರೆ.