ಅಹಮದಾಬಾದ್ (ಗುಜರಾತ್):ನಾಳೆಯಿಂದ ವಿಶ್ವದ ಕ್ರೀಡಾ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಕ್ರಿಕೆಟ್ ಹಬ್ಬ ಶುರುವಾಗಲಿದೆ. ಇನ್ನು ಒಂದು ತಿಂಗಳು ಕ್ರಿಕೆಟ್ ಜ್ವರದ ಕಾವು ದೇಶಾದ್ಯಂತ ಅಷ್ಟೇ ಏಕೆ ವಿಶ್ವದಾದ್ಯಂತ ಏರಲಿದೆ. 2023ರ ವಿಶ್ವಕಪ್ ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ವಿಶೇಷ ಎಂದರೆ ಯಾವುದೇ ಅದ್ಧೂರಿ ಉದ್ಘಾಟನಾ ಸಮಾರಂಭ ಯೋಜಿಸಲಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಆದಾಗ್ಯೂ, ಮಧ್ಯಾಹ್ನ 2:30ಕ್ಕೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಲ್ಲ ತಂಡದ ನಾಯಕರ ಫೋಟೋ ಸೆಷನ್ ಮಾಡಲಾಗುತ್ತದೆ. ಬಿಸಿಸಿಐ ಮೂಲಗಳ ಪ್ರಕಾರ, ಇಂದು ಮಧ್ಯಾಹ್ನ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಕ್ಲಬ್ ಹೌಸ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕ್ಯಾಪ್ಟನ್ ದಿನವನ್ನು ಆಯೋಜಿಸಲಾಗಿದೆ. ಇದರಲ್ಲಿ ಎಲ್ಲ ಕ್ರಿಕೆಟ್ ತಂಡಗಳ ನಾಯಕರು ಹಾಜರಿದ್ದು, ಫೋಟೋ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಎಲ್ಲ ತಂಡಗಳ ನಾಯಕರು ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯ ಗೃಹ ಇಲಾಖೆ ಮತ್ತು ಅಹಮದಾಬಾದ್ ಪೊಲೀಸರು ಭಾರಿ ಭದ್ರತೆ ಕೈಗೊಂಡಿದ್ದಾರೆ. ಅವರು ನೀಡಿರುವ ಮಾಹಿತಿ ಪ್ರಕಾರ, ಅಕ್ಟೋಬರ್ 14 ರಂದು ಆತಿಥೇಯ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡುವಣ ಪಂದ್ಯಕ್ಕೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆಯಂತೆ. ಸುರಕ್ಷತೆಯ ದೃಷ್ಟಿಯಿಂದ ಪ್ರೇಕ್ಷಕರು ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಬಾಟಲಿಗಳು ಮತ್ತು ಸುಲಭವಾಗಿ ಎಸೆಯಬಹುದಾದ ಎಲ್ಲ ವಸ್ತುಗಳನ್ನು ಭದ್ರತಾ ದೃಷ್ಟಿಯಿಂದ ನಿಷೇಧಿಸಲಾಗಿದೆ. ಎರಡು ತಂಡಗಳು ತಂಗಲಿರುವ ಹೋಟೆಲ್ನಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.