ಮುಂಬೈ (ಮಹಾರಾಷ್ಟ್ರ): ಶ್ರೀಲಂಕಾದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ರೋಹಿತ್ ಶರ್ಮಾ ಪಡೆಯ ಬಿರುಗಾಳಿ ಬೌಲಿಂಗ್ ದಾಳಿಗೆ ಸಿಂಹಳೀಯರು ಪತರುಗುಟ್ಟಿದ್ದು, ಲಂಕಾ ಆಟಗಾರರು 19.4 ಓವರ್ಗಳಲ್ಲಿ ಕೇವಲ 55 ರನ್ಗಳಿಗೆ ಸರ್ವಪತನ ಕಂಡಿದ್ದಾರೆ. ಇದರಿಂದ ಭಾರತ ತಂಡ ದಾಖಲೆಯ 302 ರನ್ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ ವಿಶ್ವಕಪ್ ಟೂರ್ನಿಯಲ್ಲಿ ಸತತ 7ನೇ ಗೆಲುವಿನ ಕೇಕೆ ಹಾಕಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ಎಂಟು ವಿಕೆಟ್ ನಷ್ಟಕ್ಕೆ 357 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಲಂಕಾ ಆಟಗಾರರ ಮೇಲೆ ಆರಂಭದಲ್ಲೇ ಟೀಂ ಇಂಡಿಯಾದ ಬೌಲರ್ಗಳು ಸವಾರಿ ಮಾಡಿದರು. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್ಗೆ ಪಟಪಟನೆ ವಿಕೆಟ್ಗಳು ಉರುಳಿದವು.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ನಾಯಕ ಕುಸಾಲ್ ಮೆಂಡಿಸ್ ಮೊದಲು ಟೀಂ ಇಂಡಿಯಾವನ್ನು ಬ್ಯಾಟಿಂಗ್ ಇಳಿಸುವ ಮೂಲಕ ಎಡವಿದರು. ನಾಯಕ ರೋಹಿತ್ ಶರ್ಮಾ (4) ಬೇಗ ಔಟಾಗಿದ್ದು ಹೊರತು ಪಡಿಸಿದರೆ, ಭಾರತ ಭರ್ಜರಿ ಬ್ಯಾಟಿಂಗ್ ಪ್ರರ್ದಶಿಸಿತು. ಶುಭ್‌ಮನ್ ಗಿಲ್ (92), ವಿರಾಟ್ ಕೊಹ್ಲಿ (88) ಹಾಗೂ ಶ್ರೇಯಸ್ ಅಯ್ಯರ್ (82) ಅವರ ಅದ್ಭತ ಆಟದಿಂದ ಭಾರತ 357 ರನ್ಗಳನ್ನು ಕಲೆ ಹಾಕಿತ್ತು. ಮತ್ತೊಂದೆಡೆ, ಬೌಲರ್ಗಳು ಬೆಂಕಿ ಚೆಂಡಿನಂತೆ ಪ್ರದರ್ಶನ ನೀಡಿದರು.
ಶೂನ್ಯ ಸುತ್ತಿದ ಐವರು ಬ್ಯಾಟರ್ಗಳು:ಶಮಿ, ಸಿರಾಜ್ ಮತ್ತು ಬುಮ್ರಾ ಎಸೆತಗಳಿಗೆ ಎದುರಿಸಲು ಸಾಧ್ಯವಾಗದೇ ಬಂದ ದಾರಿಗೆ ಸಂಕವಿಲ್ಲ ಎಂಬಂತೆ ಸಿಂಹಳೀಯರು ಪೆವಿಲಿಯನ್ ಸೇರಿಕೊಂಡರು. ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಪಾತುಮ್ ನಿಸ್ಸಾಂಕ ಅವರನ್ನು ಬುಮ್ರಾ ಎಲ್ಬಿ ಬಲೆಗೆ ಕೆಡವಿದರು. ನಂತರದಲ್ಲಿ ಸಿರಾಜ್ ತಮ್ಮ ರೋಷಾವೇಷ ಪ್ರದರ್ಶಿಸಿದರು. ದಿಮುತ್ ಕರುಣಾರತ್ನೆ ಹಾಗೂ ಸದೀರ ಸಮರವಿಕ್ರಮ ಅವರನ್ನು ಶೂನ್ಯಕ್ಕೆ ಪೆವಿಲಿಯನ್ ದಾರಿ ತೋರಿಸಿದರು. ಅಲ್ಲದೇ, ಕುಸಾಲ್ ಮೆಂಡಿಸ್ (1) ಅವರನ್ನೂ ಬೋಲ್ಡ್ ಮಾಡಿದರು.