ಬರ್ಮಿಂಗ್ಹ್ಯಾಮ್:ಉಪ ನಾಯಕ ರೋಹಿತ್ ಶರ್ಮಾರ ಅಮೋಘ ಶತಕ ಹಾಗೂ ಕೆ.ಎಲ್.ರಾಹುಲ್ರ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ, ಬಾಂಗ್ಲಾದೇಶ ಗೆಲುವಿಗೆ 315 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 180 ರನ್ ಸೇರಿಸಿದ ಈ ಜೋಡಿ ಬಾಂಗ್ಲಾ ಬೌಲಿಂಗ್ನ್ನು ಸಮರ್ಥವಾಗಿ ಎದುರಿಸಿತು. ಈ ಮಧ್ಯೆ ರೋಹಿತ್ ಶರ್ಮಾ ಈ ವಿಶ್ವಕಪ್ನಲ್ಲಿ ದಾಖಲೆಯ 4ನೇ ಶತಕ ಸಿಡಿಸಿದರು. 92 ಎಸೆತಗಳಲ್ಲಿ 104 ರನ್ ಬಾರಿಸಿದ ರೋಹಿತ್, ಸೌಮ್ಯ ಸರ್ಕಾರ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಇನ್ನು ಮತ್ತೊಂದೆಡೆ ಸಮಯೋಚಿತ ಬ್ಯಾಟಿಂಗ್ ನಡೆಸಿದ ರಾಹುಲ್ 77 ರನ್ ಗಳಿಸಿ ಬೃಹತ್ ಮೊತ್ತ ದಾಖಲಿಸುವಲ್ಲಿ ಎಡವಿದರು. ಇನ್ನುಳಿದಂತೆ ನಾಯಕ ವಿರಾಟ್ ಕೊಹ್ಲಿ 26 ಹಾಗೂ ರಿಷಭ್ ಪಂತ್ 48 ರನ್ ಗಳಿಸಿ ತಂಡದ ಮೊತ್ತಕ್ಕೆ ಕೊಡುಗೆ ನೀಡಿದರು. ಈ ಮಧ್ಯೆ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟ್ ಆಗಿದ್ದು ಭಾರತದ ರನ್ ವೇಗಕ್ಕೆ ಕಡಿವಾಣ ಬಿದ್ದಂತಾಯಿತು.
ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಅವಕಾಶ ಪಡೆದ ದಿನೇಶ್ ಕಾರ್ತಿಕ್ ನಿರಾಸೆ ಮೂಡಿಸಿದರು. ತಂಡದ ಕೊನೆಯ ಓವರ್ಗಳಲ್ಲಿ ರನ್ ಗತಿ ಏರಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದ ಕಾರ್ತಿಕ್ ಕೇವಲ 8 ರನ್ಗೆ ಔಟ್ ಆದರು. ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದ ಧೋನಿ 35 ರನ್ ಗಳಿಸಿದರು. ಒಟ್ಟಾರೆ ಟೀಂ ಇಂಡಿಯಾಗೆ 180 ರನ್ಗಳ ಭರ್ಜರಿ ಆರಂಭ ಸಿಕ್ಕರೂ ಕೂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 314 ರನ್ ಪೇರಿಸಿತು.
ಬಾಂಗ್ಲಾದೇಶ ಪರ ಮುಸ್ತಾಫಿಜರ್ ರಹಮಾನ್ 5 ಹಾಗೂ ಶಕಿಬ್ ಅಲ್ ಹಸನ್, ರುಬೆಲ್ ಹುಸೇನ್ ಹಾಗೂ ಸೌಮ್ಯ ಸರ್ಕಾರ್ ತಲಾ 1 ವಿಕೆಟ್ ಪಡೆದರು.