ಪಾಟ್‌ಚೆಫ್‌ಸ್ಟ್ರೂಮ್ (ದ.ಆಫ್ರಿಕಾ):ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾದ ಗೆಲುವಿಗೆ ಸ್ಪಿನ್ ಪಾತ್ರ ಮಹತ್ವದ್ದಾಗಿದೆ. ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಶ್ರೀಲಂಕಾ, ಜಪಾನ್ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಭಾರತ ಅಂಡರ್-19 ತಂಡ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದು, ಇಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಲು ತಂತ್ರ ರೂಪಿಸಿದೆ.
ಇತ್ತ ವೆಸ್ಟ್ ಇಂಡೀಸ್, ನೈಜೀರಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಆಸ್ಟ್ರೇಲಿಯಾ ಸಹ ಗೆಲುವಿಗೆ ಅನೇಕ ಯೋಜನೆಗಳು ರೂಪಿಸಿ ಕಣಕ್ಕಿಳಿಯುತ್ತಿದೆ. ಇತ್ತಂಡಗಳಲ್ಲಿ ಸ್ಪಿನ್ ಮೋಡಿ ಮಾಡುವ ಲಕ್ಷಣ ಗೋಚರಿಸುತ್ತಿದೆ. ಭಾರತದ ರವಿ ಬಿಶ್ನೋಯ್ ಹಾಗೂ ಆಸ್ಟ್ರೇಲಿಯಾದ ತನ್ವೀರ್ ಸಂಘಾ ನಡುವಿನ ಸ್ಪಿನ್ ಹೋರಾಟಕ್ಕೆ ಸಾಕ್ಷಿಯಾಗಲಿದೆ ಇಂದಿನ ಪಂದ್ಯ. ಪ್ರತಿಭಾವಂತ ಸ್ಪಿನ್ನರ್ ರವಿ ಬಿಶ್ನೋಯ್ ಟೂರ್ನಮೆಂಟ್‌ನ ಅತ್ಯಂತ ಪರಿಣಾಮಕಾರಿ ಬೌಲರ್ ಆಗಿ ಹೊರಹೊಮ್ಮಿದ್ದು, ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಮೇಲುಗೈ ಸಾಧಿಸಲು ನೆರವಾಗುವ ಸಾಧ್ಯತೆಯಿದೆ.
ಟೂರ್ನಿಯಲ್ಲಿ ಈ ತನಕ ಆಡಿರುವ 3 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ರವಿ ನ್ಯೂಜಿಲ್ಯಾಂಡ್ ವಿರುದ್ಧ ಪಂದ್ಯದಲ್ಲಿ 30 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸಿದ್ದರು. ಇನ್ನು ಆಸ್ಟ್ರೇಲಿಯಾದ ಸ್ಪಿನ್ನರ್ ತನ್ವೀರ್ ಸಂಘಾ ಕೂಡ ಟೂರ್ನಿಯಲ್ಲಿ ಒಟ್ಟು 10 ವಿಕೆಟ್‌ಗಳನ್ನು ಉರುಳಿಸಿದ್ದು, ನೈಜೀರಿಯಾ ವಿರುದ್ಧ 14 ರನ್‌ಗೆ ಐದು ವಿಕೆಟ್‌ಗಳು ಮತ್ತು ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ.
ಕೆಲವೇ ಕ್ಷಣಗಳಲ್ಲಿ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯದ ಗೆಲುವಿಗೆ ರವಿ ಹಾಗೂ ತನ್ವೀರ್ ಅವರ ಪಾತ್ರ ಮಹತ್ವದ್ದಾಗಿದೆ. ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಬೌಲಿಂಗ್ಗೆ ಸಿದ್ದವಾಗಿದೆ.