ಲಂಡನ್: ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿ ಪಂದ್ಯದಿಂದ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಲಿದೆ. ಇದೀಗ ಆತಿಥೇಯ ತಂಡದ ಪ್ರಮುಖ ಆಟಗಾರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ತೀವ್ರ ಹಿನ್ನಡೆಯಾಗಿದೆ.
ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ ಇದೀಗ ಮಂಡಿರಜ್ಜು(ಹ್ಯಾಮ್ಸ್ಟ್ರಿಂಗ್) ನೋವಿನಿಂದ ಬಳಲುತ್ತಿದ್ದು ಈಗಾಗಲೇ ಮುಂಬರುವ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಶನಿವಾರ ಜೇಸನ್ ರಾಯ್ಗೆ ಎಮ್ಆರ್ಐ ಸ್ಕ್ಯಾನ್ ಮಾಡಲಾಗಿದ್ದು, ಟೂರ್ನಿಯಲ್ಲಿ ಆಡುವುದು ಅನುಮಾನ ಎನ್ನುವ ಮಾತುಗಳು ಕೇಳಿಬರುತ್ತಿವೆ.
ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಬ್ಯಾಟ್ ಬೀಸಿದ್ದ ಜೇಸನ್ ರಾಯ್, ಒಂದು ಶತಕ ಹಾಗೂ ಒಂದು ಅರ್ಧಶತಕ ಬಾರಿಸಿದ್ದಾರೆ. ರಾಯ್ ಉತ್ತಮ ಓಪನಿಂಗ್ ನೀಡುವ ಆಟಗಾರನಾಗಿರುವ ಕಾರಣದಿಂದ ಸದ್ಯದ ಬೆಳವಣಿಗೆ ಕಪ್ ಗೆಲುವಿನ ನೆಚ್ಚಿನ ತಂಡಕ್ಕೆ ಬಹುದೊಡ್ಡ ಹಿನ್ನಡೆಯಾಗೋದ್ರಲ್ಲಿ ಸಂಶಯವಿಲ್ಲ. ಶುಕ್ರವಾರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮಧ್ಯದಲ್ಲಿ ಜೇಸನ್ ರಾಯ್ ನೋವಿನಿಂದ ಮೈದಾನದಿಂದ ಹೊರನಡೆದಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ಎಂಟು ವಿಕೆಟ್ಗಳ ಸುಲಭ ಜಯ ಸಾಧಿಸಿತ್ತು.
ಇಂಗ್ಲೆಂಡ್ ಮಂಗಳವಾರದಂದು ಮ್ಯಾಂಚೆಸ್ಟರ್ನಲ್ಲಿ ದುರ್ಬಲ ಆಫ್ಘಾನಿಸ್ತಾನವನ್ನು ಎದುರಿಸಲಿದೆ. ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಮೂರು ಗೆದ್ದು ಒಂದು ಸೋತು ಒಟ್ಟಾರೆ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.