ಕೋಲ್ಕತ್ತಾ: ಐಪಿಎಲ್ ವೇಳೆ ಗಾಯಕ್ಕೊಳಗಾಗಿ ಕೊನೆಯ 2 ಪಂದ್ಯಗಳಿಂದ ಹೊರಬಿದ್ದಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಚೇತರಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಸಹಾ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆಗೆ ಸಂಪೂರ್ಣ ಫಿಟ್ ಆಗಲಿದ್ದಾರೆ ಎಂದು ಗಂಗೂಲಿ ತಿಳಿಸಿದ್ದಾರೆ.
ಗಾಯದ ಸಮಸ್ಯೆ ನಿರ್ವಹಣೆಯಲ್ಲಿ ಬಿಸಿಸಿಐ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ಉತ್ತರಿಸಿರುವ ಗಂಗೂಲಿ, ಆಟಗಾರರ ಗಾಯಗಳನ್ನು ಬಿಸಿಸಿಐ ಹೇಗೆ ನಿರ್ವಹಿಸಲಿದೆ ಎಂಬುದು ಜನರಿಗೆ ಗೊತ್ತಿಲ್ಲ. ಸಹಾ ಅವರಿಗೆ ಗಾಯವಾಗಿರುವುದು ಬಿಸಿಸಿಐ ತರಬೇತಿದಾರರು ಮತ್ತು ಫಿಜಿಸಿಯೋಗೆ ಗೊತ್ತಿದೆ. ಅವರು ಖಂಡಿತಾ ಟೆಸ್ಟ್ ಸರಣಿ ವೇಳೆಗೆ ಫಿಟ್ ಆಗಲಿದ್ದು, ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ ಎಂದಿದ್ದಾರೆ.
3 ಪಂದ್ಯಗಳ ಏಕದಿನ ಸರಣಿ ನವೆಂಬರ್ 27ರಂದು ಆರಂಭವಾಗಲಿದೆ. ನಂತರ 29 ಮತ್ತು ಡಿಸೆಂಬರ್ 2ರಂದು 2 ಮತ್ತು 3ನೇ ಏಕದಿನ ಪಂದ್ಯ, ಡಿಸೆಂಬರ್ 4, 6, 8ರಂದು 3 ಪಂದ್ಯಗಳ ಟಿ-20 ನಡೆಯಲಿದೆ. ನಂತರ ಡಿಸೆಂಬರ್ 17ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.