ನವದೆಹಲಿ: 13ನೇ ಐಪಿಎಲ್ನಲ್ಲಿ ಹೀನಾಯ ಪ್ರದರ್ಶನ ತೋರುತ್ತಿದ್ದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಯ್ಕೆ ವಿಚಾರದಲ್ಲಿ ನಾಯಕ ಎಂ.ಎಸ್.ಧೋನಿಯ ಮಂತ್ರವನ್ನು ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಟೀಕಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ 2020ರ ಐಪಿಎಲ್ ಆವೃತ್ತಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ 7 ಸೋಲು ಹಾಗೂ 3 ಗೆಲುವು ಪಡೆದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೂ ಧೋನಿ ಯುವ ಆಟಗಾರರಿಗೆ ಅವಕಾಶ ನೀಡದೆ ಟೂರ್ನಿಯುದ್ದಕ್ಕೂ ಕೇದಾರ್ ಜಾಧವ್ ಹಾಗೂ ಪಿಯೂಷ್ ಚಾವ್ಲಾ ಅವರಿಗೆ ಅವಕಾಶ ನೀಡುತ್ತಿರುವುದನ್ನು ಟೀಕಿಸಿದ್ದಾರೆ.
"ಆಯ್ಕೆಯ ವಿಚಾರದಲ್ಲಿ ಧೋನಿ ನಿಲುವುಗಳೇನು? ಎನ್.ಜಗದೀಶನ್ ಅವರಲ್ಲಿ 'ಸ್ಪಾರ್ಕ್' ಕಾಣುತ್ತಿಲ್ಲ ಎಂದು ಹೇಳುತ್ತಾರೆ. ಆದರೆ ಜಾಧವ್ ಅವರಲ್ಲಿ ಅವರು ಸ್ಪಾರ್ಕ್ ಕಾಣುತ್ತಿದ್ದಾರೆಯೇ? ಇದು ನಿಜಕ್ಕೂ ಹಾಸ್ಯಾಸ್ಪದ. ಧೋನಿ ಅವರ ಈ ಉತ್ತರವನ್ನು ನಾನು ಸ್ವೀಕರಿಸುವುದಿಲ್ಲ. ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನಿಂದ ತಾನೇ ಮುಗಿಸಿಕೊಂಡಿದೆ" ಎಂದು ಶ್ರೀಕಾಂತ್, ಧೋನಿ ಹೇಳಿಕೆಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.