ಬೆಂಗಳೂರು: ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯರಲ್ಲಿ ಭಾರತ ತಂಡದ ವಿಕೆಟ್ ಕೀಪಿಂಗ್ ಹೊಣೆ ಯಾರು ಹೊರಲಿದ್ದಾರೆ ಎಂಬುದಕ್ಕೆ ಕ್ಯಾಪ್ಟನ್ ಕೊಹ್ಲಿ ಉತ್ತರಿಸಿದ್ದಾರೆ.
ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಕೌಶಲದಿಂದ ತಂಡ ಉತ್ತಮ ಸಮತೋಲನ ಕಾಯ್ದುಕೊಳ್ಳಲಿದೆ ಎಂದು ಕೊಹ್ಲಿ ಹೇಳಿದ್ದಾರೆ. ಈ ಮೂಲಕ, ಮುಂದಿನ ಸರಣಿಯಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಸರಣಿ ಜಯದ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ಆಸೀಸ್ ಸರಣಿಯ ಮೊದಲ ಪಂದ್ಯದಲ್ಲಿ ವಿಕೆಟ್ ಕೀಪರ್ ರಿಶಭ್ ಪಂತ್ ಗಾಯಗೊಂಡ ಹಿನ್ನೆಲೆ ಎರಡನೇ ಪಂದ್ಯದಲ್ಲಿ ರಾಹುಲ್ ಉತ್ತಮ ವಿಕೆಟ್ ಕೀಪಿಂಗ್ ಮಾಡಿದರು. ಜೊತೆಗೆ ಅದೇ ಪಂದ್ಯದಲ್ಲಿ ರಾಹುಲ್ 80 ರನ್ ಪೇರಿಸಿದರು. ರಾಹುಲ್ ಉತ್ತಮ ಬ್ಯಾಟ್ಸ್ಮನ್ ಆಗಿದ್ದರಿಂದ ಯಾವುದೇ ಕ್ರಮಾಂಕದಲ್ಲಾದರೂ ಆಡುತ್ತಾರೆ. ಜೊತೆಗೆ ಅಷ್ಟೇ ಚೆನ್ನಾಗಿ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ ಎಂದು ಕನ್ನಡಿಗನನ್ನು ಕೊಹ್ಲಿ ಹೊಗಳಿದರು.
ಇನ್ನು ರೋಹಿತ್ ಶರ್ಮಾ ಜೊತೆ ಉತ್ತಮ ಜೊತೆಯಾಟ ಮೂಡಿಬರಲಿದೆ ಎಂದು ಮೊದಲೇ ಅಂದುಕೊಂಡಿದ್ದೆವು. ಮೇಲಿಂದ ಮೇಲೆ ಮೂರು ಬಾರಿ ನಮ್ಮಿಬ್ಬರ ಮಧ್ಯೆ ಒಳ್ಳೆಯ ಜೊತೆಯಾಟ ಮೂಡಿಬಂದಿದೆ. ನಮ್ಮ ಪರವಾಗಿ ಎಲ್ಲವೂ ಕೂಡಿಬಂತು ಎಂದು ಕೊಹ್ಲಿ ಅಭಿಪ್ರಾಯಪಟ್ಟರು.
ಕೊನೆಯ ಪಂದ್ಯದಲ್ಲಿ ಒಂದೂ ವಿಕೆಟ್ ಪಡೆಯ ಜಸ್ಪ್ರೀತ್ ಬುಮ್ರಾ ಬೆನ್ನಿಗೆ ನಿಂತ ವಿರಾಟ್, 3.80 ಸರಾರಿಯಲ್ಲಿ 10 ಓವರ್ಗಳಲ್ಲಿ ಕೇವಲ 38 ರನ್ ನೀಡಿದ್ದಾರೆ. ವಿಕೆಟ್ ಪಡೆದವರ ಮೇಲೆ ಮಾತ್ರ ನೀವು ಗಮನ ಹರಿಸುತ್ತೀರಿ. ಆದ್ರೆ ಬುಮ್ರಾ ಬೌಲಿಂಗ್ ಕಳೆದ ಎರಡು ಪಂದ್ಯಗಳಲ್ಲಿ ಭಾರಿ ಪರಿಣಾಮ ಬೀರಿತ್ತು. ಅವರು ವಿಕೆಟ್ ಪಡೆಯದಿರುವುದು ಸ್ಕೋರ್ ಬೋರ್ಡ್ನಲ್ಲಿ ಕಾಣಿಸದಿದ್ದರೂ, ಗೆಲುವಿನಲ್ಲಿ ಅವರ ಕೊಡುಗೆ ಅಪಾರ ಎಂದು ಕೊಹ್ಲಿ ಹೇಳಿದ್ದಾರೆ.