ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶುಕ್ರವಾರ ಭಾರತೀಯರಿಗೆ ದೀಪಾವಳಿ ಹಬ್ಬಕ್ಕೆ ಶುಭ ಕೋರಿದ್ದು, ಬೆಳಕಿನ ಹಬ್ಬವನ್ನು ಪಟಾಕಿ ರಹಿತವಾಗಿ ಆಚರಿಸಲು ಮನವಿ ಮಾಡಿದ್ದಾರೆ.
ಪ್ರಸ್ತುತ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಸಿಡ್ನಿಯ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಕೊಹ್ಲಿ 3 ಏಕದಿನ ಮತ್ತು 3 ಟಿ-20 ಪಂದ್ಯಗಳನ್ನಾಡಲಿದ್ದು, ಟೆಸ್ಟ್ ಸರಣಿಯ ಮೊದಲ ಪಂದ್ಯದ ನಂತರ ತವರಿಗೆ ವಾಪಸಾಗಲಿದ್ದಾರೆ. ಪತ್ನಿ ಅನುಷ್ಕಾ ಜನವರಿಯಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದ್ದು, ಕೊಹ್ಲಿ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ.
"ನನ್ನ ಕಡೆಯಿಂದ ನಿಮಗೂ ಮತ್ತು ನಿಮ್ಮ ಕುಟಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಬೆಳಕಿನ ಹಬ್ಬ ನಿಮಗೆ ಶಾಂತಿ, ಸಮೃದ್ಧಿ ಮತ್ತು ಸಂತೋಷ ನೀಡಲಿ. ಪರಿಸರವನ್ನು ರಕ್ಷಿಸಲು ಪಟಾಕಿ ಸಿಡಿಸಬೇಡಿ ಮತ್ತು ಈ ಶುಭ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರ ಜೊತೆ ಸರಳವಾಗಿ ದೀಪ ಹಚ್ಚುವ ಮೂಲಕ ಮತ್ತು ಸಿಹಿ ಹಂಚಿ ಸಂಭ್ರಮಿಸಿ" ಎಂದು ತಮ್ಮ ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮೂಲಕ ಶುಭ ಕೋರಿದ್ದಾರೆ.
ಕೊಹ್ಲಿಯಲ್ಲದೆ ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ವಿರೇಂದ್ರ ಸೆಹ್ವಾಗ್ ಹಾಗೂ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.