ಪರ್ತ್: ಇದು ಬಹುಶಃ ಏಕದಿನ ಕ್ರಿಕೆಟ್ ಒಂದರ ಮಹಾಪತನ ಎನ್ನಬಹುದೇನೋ..?! ತಂಡದ ಗೆಲುವಿಗೆ ಇನ್ನೇನು ಐದು ರನ್ಗಳ ಅಗತ್ಯವಿತ್ತು, ಅಷ್ಟೇ ಪ್ರಮಾಣದ ವಿಕೆಟ್ ಸಹ ಉಳಿದಿತ್ತು. ನಿರಾಯಾಸವಾಗಿ ಗೆದ್ದೇಬಿಡುತ್ತೇವೆ ಎನ್ನುವ ಅಚಲ ನಂಬಿಕೆಯಲ್ಲಿದ್ದ ಆ ತಂಡ ಒಂದು ರನ್ನಿನಿಂದ ಸೋತಿದೆ ಎಂದರೆ ನೀವು ನಂಬಲೇಬೇಕು.
ಹೌದು, ಕ್ರಿಕೆಟ್ ಇತಿಹಾಸದ ಬಹುದೊಡ್ಡ ಹೈಡ್ರಾಮಾ ಒಂದಕ್ಕೆ ಸಾಕ್ಷಿಯಾಗಿದ್ದು ಆಸ್ಟ್ರೇಲಿಯಾದ ಪರ್ತ್ ಮೈದಾನ. ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಟೂರ್ನಿಯೊಂದರಲ್ಲಿ ಈ ಪರಿಯ ನಾಟಕೀಯ ಫಲಿತಾಂಶ ಕಂಡುಬಂದಿದೆ.
ಮೊದಲು ಬ್ಯಾಟ್ ಮಾಡಿದ್ದ ವಿಕ್ಟೋರಿಯಾ 47.5 ಓವರ್ನಲ್ಲಿ 185 ರನ್ ಗಳಿಸಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಟಾಸ್ಮೇನಿಯಾ ತಂಡ ಇನ್ನೇನು ಗೆಲುವಿನ ನಗೆ ಬೀರಬೇಕು ಎನ್ನುವಷ್ಟರಲ್ಲಿ ಸತತ ವಿಕೆಟ್ ಕಳೆದುಕೊಂಡು ಅನಿರೀಕ್ಷಿತ ಸೋಲನುಭವಿಸಿತು.
181 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಟಾಸ್ಮೇನಿಯಾ ಇನ್ನು ಆರು ರನ್ ಗಳಿಸಿದ್ದರೆ ಸುಲಭ ಜಯ ಸಂಪಾದಿಸುತ್ತಿತ್ತು. ಆದರೆ ವಿಕ್ಟೋರಿಯಾ ತಂಡದ ಬಿಗುದಾಳಿಗೆ ನಿರಂತರ ವಿಕೆಟ್ ಉರುಳಿದವು.