ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮೂರನೇ ಅಂಪೈರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾಗುವ ಮೂಲಕ ನಿರಾಸೆಯನುಭವಿಸಿದ್ದಾರೆ.
ಉತ್ತಮ ಆರಂಭ ಪಡೆದಿದ್ದ ರೋಹಿತ್ ಶರ್ಮಾ 23 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಹಾಗೂ ಬೌಂಡರಿ ಸಹಿತ 18 ರನ್ಗಳಿಸಿದ್ದರು. ಈ ವೇಳೆ ರೋಚ್ ಎಸೆದ 6ನೇ ಓವರ್ನ ಕೊನೆಯ ಎಸೆತದಲ್ಲಿ ರೋಹಿತ್ ಡಿಫೆನ್ಸ್ ಮಾಡಿದರು. ಬಾಲ್ ಕೀಪರ್ ಕೈಗೆ ಸೇರಿತ್ತು. ವಿಂಡೀಸ್ ತಂಡ ಕ್ಯಾಚ್ಗಾಗಿ ಅಫೀಲ್ ಸಲ್ಲಿಸಿತು. ಮೈದಾನದ ಅಂಪೈರ್ ಔಟ್ ನೀಡದಿದ್ದರಿಂದ ಬೌಲರ್ ಒತ್ತಾಯದ ಮೇರೆಗೆ ಹೋಲ್ಡರ್ ರಿವ್ಯೂವ್ ತೆಗೆದುಕೊಂಡರು.
ಟಿವಿ ಅಂಪೈರ್ ರೀಪ್ಲೆ ವೀಕ್ಷಿಸಿ ರೋಹಿತ್ ಔಟ್ ಎಂದು ತೀರ್ಪು ನೀಡಿದರು. ಆದರೆ, ಬಾಲ್ ರೋಹಿತ್ರ ಪ್ಯಾಡ್ಗೆ ಮತ್ತು ಬ್ಯಾಟ್ಗೆ ಒಂದೇ ಬಾರಿ ತಗುಲಿದಂತೆ ಕಾಣುತ್ತಿತ್ತು. ಅಲ್ಟ್ರಾ ಎಡ್ಜ್ನಲ್ಲಿ ಬಾಲ್ ಮೊದಲು ಪ್ಯಾಡ್ಗೆ ಬಡಿದಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ, ಅಂಪೈರ್ ರೋಹಿತ್ರನ್ನು ಔಟ್ ಎಂದು ತೀರ್ಪು ನೀಡಿದಾಗ ಸ್ವತಃ ಮೈದಾನದ ಅಂಪೈರ್ ಕೂಡ ಶಾಕ್ ಆದರು. ಇನ್ನು ಥರ್ಡ್ ಅಂಪೈರ್ ತೀರ್ಪಿನಿಂದ ರೋಹಿತ್ ನಗುತ್ತಲೆ ತಮ್ಮ ಅಸಮಾಧಾನ ಹೊರಾಹಾಕುತ್ತಾ ಮೈದಾನದಿಂದ ಹೊರ ನಡೆದರು.
ವಿವಾದಾತ್ಮಕ ತೀರ್ಪನ್ನು ಭಾರತೀಯ ಅಭಿಮಾನಿಗಳು ಖಂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.